ಈಗ ಆಶ್ರಯ ಆಸ್ಪತ್ರೆ ಇರುವ ಜಾಗದಲ್ಲಿ ನಮಗೆ ತಿಳಿದಂತೆ ನಾವು ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ಸಮಯದಲ್ಲಿ ಒಂದು ವಠಾರವಿತ್ತು. ಅಲ್ಲಿ ಒಂದು ನಾಡ ಹೆಂಚಿನ ಮನೆ, ಬಾವಿ ಹಿಂಬದಿಯಲ್ಲಿ ಹದಿನೈದು ಜನರಿದ್ದ ವಠಾರ. ಆಗ ನಮಗೆ ಅದ್ಯಾರದ್ದು, ಯಾರಿದ್ದಾರೆ ಮುಂತಾದುವುಗಳ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಕ್ರಮೇಣ ನಮಗೆ ತಿಳಿದ ವಿಚಾರವೆಂದರೆ ಆ ವಠಾರ “ಆಶ್ರಯ ” ಎಂಬುದಕ್ಕೆ ಅನ್ವರ್ಥವಾಗುವಂತಹಾ ತಾಣವೇ ಆಗಿತ್ತು. ಎಂಬುದು ತಿಳಿದು ಬಂತು. ಕಾರಣ ಅಲ್ಲಿ ವಾಸವಿದ್ದವರಿಗೆ ಯಾವುದೇ ಬಾಡಿಗೆ ಯಾ ಶುಲ್ಕವಿರಲಿಲ್ಲ.
ಅಲ್ಲಿ ಜನ್ಮ ನೀಡಿದ ಮಾತೆಯರು ಹಲವಾರು!ಇಂಜಿನಿಯರ್ ಗಳು, ಡ್ರೈವರ್ ಗಳು, ಅರ್ಚಕರು, ಅಗಸರು, ವ್ಯಾಪಾರಿಗಳು, ಶಾಲಾ ಶಿಕ್ಷಕರು, ನ್ಯಾಯವಾದಿಗಳು, ವಿದ್ಯಾರ್ಥಿಗಳು ಹೀಗೆ ಹತ್ತು ಹಲವಾರು ಕ್ಷೇತ್ರದ ವಿಭಿನ್ನ ಜನರು ಉಚಿತವಾಗಿ ಅಲ್ಲಿದ್ದು, ತಮ್ಮ ಬದುಕನ್ನ ರೂಪಿಸಿಕೊಂಡು ಹಲವರು ಪ್ರಸಿದ್ಧರೂ ಆಗಿದ್ದಾರೆ. ಒಟ್ಟಿನಲ್ಲಿ ಕಷ್ಟ ಎಂದು ಹೋದವರಿಗೆ ಆಶ್ರಯ ತಾಣವೇ ಆಗಿತ್ತು… ಇಂತಹಾ ಒಂದು ಪ್ರತಿಪಲಾಪೇಕ್ಷೆ ಇಲ್ಲದ ಧರ್ಮದ ಕಾರ್ಯ ನಡೆದಿತ್ತು ಎಂಬುದನ್ನು ಇಂದಿನ ಪಿಳಿಗೆಯವರು ನಂಬುವುದು ಕಷ್ಟ!ಇದರ ಹಿಂದಿನ ರೂವಾರಿಗಳು ಈ ಜಿಲ್ಲೆಯಲ್ಲೇ ಹೆಸರಾದ ಬಾಳೆಹಳ್ಳಿ ಕುಟುಂಭದವರು. ಅತ್ಯಂತ ದೈವಭಕ್ತರೂ, ಧರ್ಮಭೀರುಗಳೂ ಹಾಗೂ ಮಹಾನ್ ದಾನಿಗಳಾದ ಶ್ರೀಯುತ ಬಾಳೆಹಳ್ಳಿ ರಂಗೇಗೌಡರು ಮತ್ತು ಅವರ ತಮ್ಮನವರಾದ ಬಿ. ಎಸ್ ಪುಟ್ಟೇಗೌಡರು! ಇನ್ನು ಇವರಿಬ್ಬರ ಬಗ್ಗೆ ತಿಳಿಯದವರೇ ಇಲ್ಲ. ಸ್ವತಃ ಧರ್ಮಸ್ಥಳದ ಧರ್ಮಾಧಿಕಾರಿಗಳು, ಬಾಳೆಹಳ್ಳಿಯಲ್ಲಿ ನಡೆಯುತ್ತಿದ್ದ ಜಾತ್ರೆ, ಧಾರ್ಮಿಕ ಕಾರ್ಯಗಳು, ಅನ್ನಸಂತರ್ಪಣೆ ಇವುಗಳನ್ನು ಕಂಡು ಇದು ಇನ್ನೊಂದು ಧರ್ಮಸ್ಥಳ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂತಹಾ ಮಹಾನುಭಾವರುಗಳು ತಮ್ಮ ಜೀವಿತಾವಧಿಯಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಆಶ್ರಯ ನೀಡಿದ್ದೂ ಅಲ್ಲದೆ ಸಾವಿರಾರು ಜನರಿಗೆ ಕಷ್ಟ ಎಂದು ಬಂದಾಗ ಆರ್ಥಿಕವಾಗಿಯೂ ಸಹಾಯ ಮಾಡಿ ದಾನ ಧರ್ಮದಿಂದಲೇ ತಮ್ಮ ಜೀವಿತಾವಧಿಯನ್ನು ಕೃತಾರ್ಥ ಮಾಡಿಕೊಂಡವರು.
ಕಾಲಕ್ರಮೇಣ ಕಾರಣಾಂತರದಿಂದ ಈ ನಿವೇಶನವನ್ನು ಈಗಿರುವ ಆಶ್ರಯ ಆಡಳಿತ ಮಂಡಳಿಯವರು ಖರಿದಿಸಿ ಆಸ್ಪತ್ರೆ ಸ್ಥಾಪಿಸಿದರು. ಆಗಿನ ದಿನಗಳಲ್ಲಿ ಜಿಲ್ಲೆಯಲ್ಲಿ ಒಂದು ಒಳ್ಳೆಯ ಆಸ್ಪತ್ರೆ ಆಯಿತೆಂದು ಜನ ಸಂತೋಷಪಟ್ಟಿದ್ದರು. ಆದರೆ ಇತ್ತೀಚಿನ ದಿನಗಳ ವಿದ್ಯಮಾನ ನೋಡಿದರೆ “ಆಶ್ರಯ ” ನೀಡಿದ ಜಾಗದ ಉದ್ದೇಶ ತಲೆಕೆಳಗಾಗಿ “ಆಶ್ರಯ”ದ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ಹಣ ವಸೂಲಿ ಮಾಡುತ್ತಿರುವ ವಿಚಾರ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ನೋಡಿದರೆ ವಿಪರ್ಯಾಸವೆನ್ನಬೇಕೋ? ಶಾಂತಿ, ಪ್ರೀತಿ ಹಾಗೂ ಸಹ ಬಾಳ್ವೆಗೆ ಹೆಸರಾದ ಮಲೆನಾಡಿನ ಕಪ್ಪುಚುಕ್ಕೆ ಎನ್ನಬೇಕೋ ತಿಳಿಯುತ್ತಿಲ್ಲ.
ಇನ್ನಾದರೂ ಆಸ್ಪತ್ರೆಯ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಜನಸ್ನೇಹಿಯಾಗುವುದು ಒಳಿತು ಎಂಬುದು ಸಾರ್ವಜನಿಕರ ಅಭಿಪ್ರಾಯ.