ಚಿತ್ರರಂಗದ ಸಮಸ್ಯೆಗೆ ಪರಿಹಾರ: ಸರ್ಕಾರದಿಂದ ಗುಡ್ ನ್ಯೂಸ್

0

ಕೋವಿಡ್ ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕನ್ನಡ ಚಿತ್ರರಂಗದ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ನಿರ್ಧರಿಸಿದೆ.

ಚಿತ್ರರಂಗದ ಪ್ರಮುಖರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಬುಧವಾರ ಚರ್ಚೆ ನಡೆಸಿದ್ದರು. ಆ ವೇಳೆ ಎಲ್ಲ ಸಮಸ್ಯೆಗಳ ಮಾಹಿತಿ ಪಡೆದಿದ್ದ ಅವರು ಈ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ರಚನಾತ್ಮಕ ಮಾತುಕತೆ ನಡೆಸುವಂತೆ ಉಪಮುಖ್ಯಮಂತ್ರಿ ಡಾ. ಸಿ,ಎನ್. ‌ಅಶ್ವತ್ಥ್ ನಾರಾಯಣ್ ಅವರಿಗೆ ಸೂಚಿಸಿದ್ದರು. ಅದರಂತೆ ಚಿತ್ರರಂಗದ ಪ್ರಮುಖರ ಜತೆ ಗುರುವಾರ ಚರ್ಚೆ ನಡೆಸಿದರಲ್ಲದೆ, ಪ್ರತಿಯೊಂದು ಬೇಡಿಕೆ ಈಡೇರಿಕೆಯ ಸಾಧಕಬಾಧಕವನ್ನು ಮುಕ್ತವಾಗಿ ಪರಿಶೀಲಿಸಿದ್ದಾರೆ.

ಈ ಬೇಡಿಕೆಗಳಲ್ಲಿ ಕೆಲವು ಕಾರ್ಮಿಕ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಇವುಗಳ ಬಗ್ಗೆ ಆದಷ್ಟು ಇವೆರಡೂ ಇಲಾಖೆಗಳ ಸಚಿವರೂ ಮತ್ತು ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಚಿತ್ರನಗರಿ ನಿರ್ಮಾಣ, ಕಾರ್ಮಿಕರ ಸಮಸ್ಯೆಗಳು, ಚಿತ್ರೀಕರಣದಲ್ಲಿ ಪ್ರಾಣಿಗಳನ್ನು ಬಳಕೆ ಬಿಕ್ಕಟ್ಟು, ಡಿಐ-ವಿಎಫ್‌ಕ್ಸ್‌ ಉದ್ಯಮಕ್ಕೆ ವಿದ್ಯುತ್‌ ಶುಲ್ಕ ವಿನಾಯಿತಿ, ಸಿನಿಮಾ ತೆರಿಗೆ, ಸಕಾಲ ವ್ಯವಸ್ಥೆ, ನಿರ್ಮಾಪಕರಿಗೆ ಜಿಎಸ್‌ಟಿ ವಾಪಸ್‌ ನೀಡುವುದು, ಫೈರಸಿ ನಿಗ್ರಹ, ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಚಿತ್ರರಂಗದ ಅಧಿಕೃತ ಸಂಸ್ಥೆಯನ್ನಾಗಿ ಘೋಷಿಸುವುದು, ನೂತನ ಚಲನಚಿತ್ರ ನೀತಿ ರೂಪಿಸುವುದು, ಲಾಕ್‌ಡೌನ್‌ ವೇಳೆಯಲ್ಲಿ ಥಿಯೇಟರುಗಳಿಗೆ ಆಸ್ತಿ ತೆರಿಗೆಯಿಂದ ವಿನಾಯಿತಿ, ವಿದ್ಯುತ್‌ ಶುಲ್ಕ ಮನ್ನಾ, ಸಕಾಲಕ್ಕೆ ಸಬ್ಸಿಡಿ ನೀಡಿಕೆ ಸೇರಿದಂತೆ ಚಿತ್ರರಂಗದ ಗಣ್ಯರು ಮುಂದಿಟ್ಟ ಬೇಡಿಕೆಗಳ ಬಗ್ಗೆ ಉಪ ಮುಖ್ಯಮಂತ್ರಿ ಅವರು ಕೂಲಂಕುಷವಾಗಿ ಚರ್ಚೆ ನಡೆಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಬಾಲಿವುಡ್‌ ಹಾಗೂ ನಮ್ಮ ನೆರೆಹೊರೆಯ ಭಾಷೆಗಳ ಚಿತ್ರರಂಗಗಳಂತೆ ಬೆಳೆಯುವ ಎಲ್ಲ ರೀತಿಯ ಶಕ್ತಿಯೂ ಇದೆ. ಅದಕ್ಕೆ ಬೇಕಾದ ಎಲ್ಲ ಪೂರಕ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ. ಈ ಬಗ್ಗೆ ಮುಖ್ಯಮಂತ್ರಿಯವರು ಅತೀವ ಆಸಕ್ತಿ ಹೊಂದಿದ್ದಾರೆಂದು ಡಿಸಿಎಂ ಹೇಳಿದ್ದಾರೆ.

ಸೈಬರ್‌ ಸೆಕ್ಯೂರಿಟಿ:

ಚಿತ್ರರಂಗ ಸಿನಿಮಾಗಳ ಪೈರಸಿ ಬಗ್ಗೆ ತೀವ್ರ ಆತಂಕವನ್ನು ಹೊಂದಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಇಡೀ ಚಿತ್ರರಂಗಕ್ಕೆ ಸೈಬರ್‌ ಸೆಕ್ಯೂರಿಟಿ ಖಾತ್ರಿ ಕೊಡಲು ಸಿದ್ಧವಾಗಿದೆ. ಅತ್ಯುತ್ತಮ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಬರುತ್ತಿದ್ದು, ಅವುಗಳನ್ನು ಅಗಂತುಕರು ಪೈರಸಿ ಮಾಡಿ ಆನ್‌ಲೈನ್‌ನಲ್ಲಿ ಬಿಡುತ್ತಿರುವುದರಿಂದ ನಿರ್ಮಾಪಕರಿಗೆ ದೊಡ್ಡ ಹೊಡೆತ ಬೀಳುತ್ತಿದೆ. ಇದಕ್ಕೆ ಕಡಿವಾಣ ಹಾಕಲು ನಮ್ಮ ಸೈಬರ್‌ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಸಚಿವರು ಮತ್ತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಚಿತ್ರರಂಗದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಮಾಜಿ ಶಾಸಕಿ ಹಾಗೂ ಹಿರಿಯ ನಟಿ ತಾರಾ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, ನಿರ್ಮಾಪಕರಾದ ಎನ್.ಎಂ. ಸುರೇಶ್‌ ಮುಂತಾದವರು ನಿಯೋಗದಲ್ಲಿದ್ದರು.

LEAVE A REPLY

Please enter your comment!
Please enter your name here