ಚೀನಾ ಆಗಸಕ್ಕೆ ಲಗ್ಗೆ ಹಾಕಿದ ಅಮೆರಿಕ ವಿಮಾನಗಳು; ಸಮರಾಭ್ಯಾಸ ವೇಳೆಯೇ ಡ್ರ್ಯಾಗನ್​ಗೆ ಸವಾಲು

0

ಅಮೆರಿಕದ ವಿಮಾನಗಳು ನೇರವಾಗಿ ಚೀನಾ ಆಗಸದ ಮೇಲೆಯೇ ಹಾರಾಡಿವೆ. ಆ ಮೂಲಕ ಡ್ರ್ಯಾಗನ್​ ರಾಷ್ಟ್ರಕ್ಕೆ ಸವಾಲೊಡ್ಡಿದೆ.

ಚೀನಾದ ಪೀಪಲ್ಸ್​ ಲಿಬರೇಷನ್​​ ಆರ್ಮಿ ದಕ್ಷಿಣ ಚೀನಾ ಸಮುದ್ರದಲ್ಲಿ ಸಮರಾಭ್ಯಾಸದಲ್ಲಿ ನಿರತವಾಗಿರುವಾಗಲೇ ಅಮೆರಿಕದ ಯು- 2 ಗೂಢಚಾರ ವಿಮಾನಗಳು ಚೀನಾದ ಆಗಸದ ಮೇಲೆಯೇ ಹಾರಾಟ ನಡೆಸಿವೆ. ಸತತ ಎರಡನೇ ದಿನವೂ ಇದು ಪುನರಾವರ್ತನೆಯಾಗಿದೆ. ಬುಧವಾರ ಯುಎಸ್​ ಆರ್​ಸಿ-135ಎಸ್​ ವಿಮಾನ ಕೂಡ ಚೀನಾದ ಮೇಲೆ ಹಾರಾಟ ನಡೆಸಿ ಸುರಕ್ಷಿತವಾಗಿ ಮರಳಿದೆ.

ಸಹಜವಾಗಿಯೇ ಇದು ಚೀನಾದ ನಿದ್ದೆಗೆಡಿಸಿದೆ. ಬೇರೆ ದೇಶಗಳ ವಿಮಾನ ತನ್ನ ದೇಶದ ವಾಯು ವ್ಯಾಪ್ತಿಯಲ್ಲಿ ಹಾರಾಟ ನಡೆಸಿ ಮರಳಿದರೂ ಅದಕ್ಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ವಿಷಯ ಗೊತ್ತಾಗುತ್ತಿದ್ದಂತೆ ಚೀನಾದ ವಿದೇಶಾಂಗ ಸಚಿವಾಲಯ ಹಾಗೂ ರಕ್ಷಣಾ ಇಲಾಖೆ ಭಾರಿ ಆಕ್ರೋಶ ವ್ಯಕ್ತಪಡಿಸಿವೆ.

ಸಮರಾಭ್ಯಾಸದ ವೇಳೆಯಲ್ಲಿಯೇ ಅಮೆರಿಕದ ವಿಮಾನಗಳು ಚೀನಾದ ಮೇಲೆ ಹಾರಾಟ ನಡೆಸಿದ್ದು, ಸಂಘರ್ಷಕ್ಕೆ ಪ್ರಚೋದನೆಯಾಗಿದೆ. ಜತೆಗೆ, ಇದು ಅಪಘಾತ ಅಥವಾ ಇನ್ನಿತರ ದುರಂತಕ್ಕೆ ಕಾರಣವಾಗಬಲ್ಲುದು ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

ಪೂರ್ವದಿಂದ ಬಾಷಿ ಕಾಲುವೆ ಮೂಲಕ ಹಾರಾಟ ಆರಂಭಿಸಿದ ಅಮೆರಿಕ ವಿಮಾನ, ದಕ್ಷಿಣ ಚೀನಾ ಸಮುದ್ರದ ಮೂಲಕ ಆ ದೇಶದ ಆಗಸ ಪ್ರವೇಶಿಸಿದೆ. ಬಳಿಕ ಅದೇ ಮಾರ್ಗದಲ್ಲಿ ಸುರಕ್ಷಿತವಾಗಿ ಹಿಂದಿರುಗಿದೆ. ಚೀನಾ ಸೇನೆ ಸಮರಾಭ್ಯಾಸ ನಡೆಸುತ್ತಿದ್ದ ಹೈನಾನ್​ ದ್ವೀಪದ ಬಳಿಯಿಂದಲೇ ಇದು ಚೀನಾಗೆ ಪ್ರವೇಶಿಸಿದೆ ಎಂದು ಹೇಳಲಾಗಿದೆ.

ಅಮೆರಿಕ ವಿಮಾನದ ಅತಿಕ್ರಮ ಪ್ರವೇಶ ಚೀನಾ ಸೇನೆಯ ಸಮರಾಭ್ಯಾಸ ಹಾಗೂ ತರಬೇತಿಗೆ ಭಾರಿ ತೊಂದರೆಯಾಗಿದೆ ಎಂದು ವಿದೇಶಾಂಗ ವಕ್ತಾರ ವು ಕಿಯಾನ್​ ಹೇಳಿದ್ದಾರೆ. ಜತೆಗೆ, ವಿಮಾನವನ್ನು ಹೊಡೆದುರುಳಿಸಬಹುದಾದ ಎಲ್ಲ ಸಾಧ್ಯತೆಗಳಿದ್ದವು ಎಂದು ಹೇಳಿದ್ದಾರೆ. ವಿದೇಶಾಂಗ ಸಚಿವಾಲಯ ತನ್ನ ದೂರನ್ನು ದಾಖಲಿಸಿದೆ.

LEAVE A REPLY

Please enter your comment!
Please enter your name here