ಒಂದೊಮ್ಮೆ ಗಡಿಯಲ್ಲಿ ಯುದ್ಧ ಸಂಭವಿಸಿದೆ ಭಾರತ ಗೆಲ್ಲಲು ಸಾಧ್ಯವೇ ಇಲ್ಲವೆಂದು ಇತ್ತೀಚೆಗಷ್ಟೇ ಚೀನಾ ಹೇಳಿದೆ. ಅಲ್ಲಿನ ಸರ್ಕಾರದ ಮುಖವಾಣಿ ಪತ್ರಿಕೆ ಗ್ಲೋಬಲ್ ಟೈಮ್ ತನ್ನ ಸಂಪಾದಕೀಯದಲ್ಲಿ ಭಾರತದ ಸೋಲು ನಿಶ್ಚಿತ ಎಂದು ಬರೆದುಕೊಂಡಿತ್ತು.
ಇದೀಗ ಪಾಕಿಸ್ತಾನ ಕೂಡ ಅದೇ ರಾಗ ಎಳೆದಿದೆ. ಈಗೇನಾದರೂ ಯುದ್ಧವಾದರೆ ಪಾಕಿಸ್ತಾನಕ್ಕೆ ಗೆಲುವು ನಿಶ್ಚಿತ ಎಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಹೇಳಿದ್ದಾರೆ. ಭಾರತದ ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದ್ದಾರೆ.
ಇಂದು ರಾವಲ್ಪಿಂಡಿಯಲ್ಲಿರುವ ಜನರಲ್ ಪ್ರಧಾನ ಕಚೇರಿಯಲ್ಲಿ ನಡೆದ ರಕ್ಷಣಾ ದಿನ ಮತ್ತು ಹುತಾತ್ಮ ದಿನ ಆಚರಣೆ ಸಂದರ್ಭದಲ್ಲಿ ಮಾತನಾಡಿದ ಬಜ್ವಾ, ಎಲ್ಲರೀತಿಯ ಆಕ್ರಮಣಕ್ಕೆ ಸೂಕ್ತ ಉತ್ತರ ನೀಡಲು ನಾವು ಸಿದ್ಧರಿದ್ದೇವೆ. ಐದನೇ ತಲೆಮಾರಿನ ಅಥವಾ ಹೈಬ್ರಿಡ್ ಮಾದರಿಯ ಯುದ್ಧದ ರೂಪದಲ್ಲಿ ನಮಗೆ ಅನೇಕ ಸವಾಲುಗಳನ್ನು ಒಡ್ಡಲಾಗುತ್ತಿದೆ. ಪಾಕಿಸ್ತಾನ ಮತ್ತು ಇಲ್ಲಿನ ಸೇನೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ, ಅಪಖ್ಯಾತಿ ತರುವುದೇ ಇದರ ಉದ್ದೇಶ. ಆದರೆ ಇಂಥ ಹೈಬ್ರೀಡ್ ಯುದ್ಧವನ್ನು ಸಶಕ್ತವಾಗಿ ಎದುರಿಸುವ ಶಕ್ತಿ ನಮಗಿದೆ. ಅಂತಿಮವಾಗಿ ಜಯ ನಮಗೇ ಸಿಗುತ್ತದೆ ಎಂದಿದ್ದಾರೆ.
ಪಾಕಿಸ್ತಾನ ಶಾಂತಿಪ್ರಿಯ ದೇಶ. ಆದರೆ ನಮ್ಮ ಮೇಲೆ ಯುದ್ಧ ಸಾರಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ. ಯಾವುದೇ ರೀತಿಯ ಆಕ್ರಮಣವನ್ನೂ ಎದುರಿಸುತ್ತೇವೆ ಎಂದು ಹೇಳಿದ್ದಾರೆ.