ಚೀನಾದ ಭೌಗೋಳಿಕ ಅತಿಕ್ರಮಣ ತಡೆಯುವುದಕ್ಕಾಗಿ ಕೇಂದ್ರ ಸರ್ಕಾರ ರಾಜತಾಂತ್ರಿಕವಾಗಿ, ಸೇನಾ ಮಟ್ಟದಲ್ಲಿ ನಡೆಸುತ್ತಿರುವ ಮಾತುಕತೆಗಳ ಮೂಲಕ ನಿರೀಕ್ಷಿತ ಫಲಕ್ಕಾಗಿ ದೇಶ ಎದುರು ನೋಡುತ್ತಿದೆ. ಹೀಗಿರುವಾಗಲೇ ಅನಿರೀಕ್ಷಿತ ಮತ್ತು ಅನಪೇಕ್ಷಿತ ಸಂದರ್ಭದಲ್ಲಿ ಯುದ್ಧ ಮಾಡಬೇಕಾಗಿ ಬಂದರೆ ಎಂಬ ಕಾರಣಕ್ಕೆ ಭಾರತೀಯ ಸೇನೆ ಸಮರಕ್ಕೆ ಸಜ್ಜಾಗತೊಡಗಿದೆ.
ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿ ಜನರಲ್ ಬಿಪಿನ್ ರಾವತ್ ಅವರ ಮಾರ್ಗದರ್ಶನ, ಎರಡು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಇಬ್ಬರು ಸಹಪಾಠಿಗಳು ಭೂಸೇನೆ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಮಾರ್ಷಲ್ ಆರ್ಕೆಎಸ್ ಬದೌರಿಯಾ ಮುನ್ನಡೆಸುತ್ತಿರುವ ಈ ಸಂದರ್ಭದಲ್ಲಿ ಸೇನೆ ಮತ್ತು ವಾಯುಪಡೆಗಳು ಪೂರ್ವ ಲಡಾಕ್ ಸೆಕ್ಟರ್ನಲ್ಲಿ ಚೀನಾದ ಭೌಗೋಳಿಕ ಅತಿಕ್ರಮಣ ತಡೆಯುವುದಕ್ಕಾಗಿ ಸಜ್ಜಾಗುತ್ತಿವೆ. ಇದಕ್ಕೆ ಪೂರಕವಾಗಿ ಲೇಹ್ ವಾಯುನೆಲೆಯಲ್ಲಿ ಸಿ-17ಎಸ್, ಇಲ್ಯೂಶಿನ್ -76ಎಸ್, ಸಿ-130ಜೆ ಸೂಪರ್ ಹರ್ಕ್ಯುಲೆಸ್ ಸಮರ ವಿಮಾನಗಳು ಲ್ಯಾಂಡ್ ಆಗಿವೆ ಎಂದು ಎಎನ್ಐ ವರದಿ ಮಾಡಿದೆ.
ಇದರಂತೆ, ಸೇನೆ ಮತ್ತು ಇತರೆ ಭದ್ರತಾ ಪಡೆಗಳಿಂದ ಏನೇ ಅಗತ್ಯ ಬಂದರೂ ಅದನ್ನು ಕೂಡಲೇ ಈಡೇರಿಸಬೇಕು ಎಂಬ ಆದೇಶ ವಾಯುಪಡೆಯ ಕೇಂದ್ರ ಕಚೇರಿಯಿಂದ ಬಂದಿದೆ. ಫಲಿತಾಂಶ ಏನೆಂಬುದು ನಿಮಗೇ ತಿಳಿಯಲಿದೆ ಎಂದು ಲಡಾಕ್ನಲ್ಲಿರುವ ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲಡಾಕ್ ಗಡಿ ಭಾಗದಲ್ಲಿ ಭಾರತೀಯ ಸೇನೆ ಚೀನಾ ಸೇನೆಗೆ ದೃಷ್ಟಿ ಮಿಲಾಯಿಸುವಷ್ಟು ಮಟ್ಟಿಗೆ ಸನ್ನದ್ಧವಾಗಿದೆ. ಚೀನಾ ಯಾವುದೇ ಆಕ್ರಮಣಕಾರಿ ನಡೆಯನ್ನು ತೋರಿದರೂ ಅದನ್ನು ಎದುರಿಸುವ ಮತ್ತು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಸಾಮರ್ಥ್ಯ, ಸನ್ನದ್ಧತೆಯನ್ನು ಭಾರತೀಯ ಸೇನೆ ರೂಢಿಮಾಡಿಕೊಂಡಿದೆ. ಇದೇ ರೀತಿ ಪಾಕಿಸ್ತಾನದ ಗಡಿ ಭಾಗದಲ್ಲಿ ಗರಿಷ್ಠ ನಿಗಾವಹಿಸಲಾಗುತ್ತಿದ್ದು, ಪಾಕ್ ಸೇನೆಯ ಪ್ರತಿ ಪ್ರಚೋದನಕಾರಿ ನಡೆಗೆ ಅದೇ ರೀತಿಯ ಪ್ರತ್ಯುತ್ತರ ನೀಡಲಾಗುತ್ತಿದೆ. ಚಿನೂಕ್, ಅಪ್ಪಾಚೆ, Mi-17V5s ಹೆಲಿಕಾಪ್ಟರ್ಗಳು ಗಡಿ ಭಾಗದಲ್ಲಿ ಹಾರಾಟ ನಡೆಸಿದ್ದು, ಸೂಕ್ಷ್ಮ ಸನ್ನಿವೇಶದಲ್ಲಿ ಸೇನೆಯ ನೆರವಿಗೆ ಧಾವಿಸುತ್ತದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)