ಅರುಣಾಚಲ ಪ್ರದೇಶದ ಅಪ್ಪರ್ ಸುಬಾನ್ಸಿರಿ ಜಿಲ್ಲೆಯ ಐವರು ಭಾರತೀಯರನ್ನು ಚೀನಾದ ಸೇನೆ ಅಪಹರಿಸಿ ಒತ್ತೆ ಸೆರೆಯಲ್ಲಿಟ್ಟುಕೊಂಡಿದ್ದು, ಇದೊಂದು ಆಘಾತಕಾರಿ ಸುದ್ದಿಯಾಗಿದೆ.ಕೆಲವು ತಿಂಗಳ ಹಿಂದೆ ಇದೇ ರೀತಿಯ ಘಟನೆ ನಡೆದಿದ್ದು, ಚೀನಾ ಸೇನೆಗೆ ತಕ್ಕ ಉತ್ತರ ನೀಡುವ ಅಗತ್ಯವಿದೆ ಎಂದು ಕಾಂಗ್ರೆಸ್ ಶಾಸಕ ನಿನೊಂಗ್ ಎರಿಂಗ್ ಟ್ವೀಟಿಸಿದ್ದಾರೆ.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ)ಅಪಹರಿಸಿರುವ ಐವರು ಭಾರತೀಯರ ಹೆಸರನ್ನು ಒಳಗೊಂಡ ಫೇಸ್‌ಬುಕ್ ಪೋಸ್ಟ್‌ನ ಸ್ಟ್ರೀನ್‌ಶಾಟ್‌ನ್ನು ಎರಿಂಗ್ ಟ್ವೀಟ್ ಮಾಡಿದ್ದಾರೆ.
ಐವರು ಭಾರತೀಯರನ್ನು ಯಾವಾಗ ಅಪಹರಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕ ನಮೂದಿಸಿಲ್ಲ. ಭಾರತದ ನಾಗರಿಕರು ಮೀನುಗಾರಿಕೆಗೆ ತೆರಳಿದ ವೇಳೆ ಅಪಹರಿಸಿದ್ದಾರೆ ಎಂದು ನಿನೊಂಗ್ ಎರಿಂಗ್ ಹೇಳಿದ್ದಾರೆ.
ಮಾರ್ಚ್ 19ರಂದು ಅಪ್ಪರ್ ಸುಬಾನ್ಸಿರಿ ಜಿಲ್ಲೆಯ ಅಸಪಿಲಾ ಸೆಕ್ಟರ್‌ನಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯು 21ರ ಹರೆಯದ ಯುವಕನನ್ನು ಅಪಹರಿಸಿತ್ತು.
ಪೂರ್ವ ಲಡಾಖ್‌ನಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವ ಹೊತ್ತಿನಲ್ಲೇ ಕಾಂಗ್ರೆಸ್ ನಾಯಕ ಈ ಅಪಹರಣದ ಕುರಿತು ಟ್ವೀಟ್ ಮಾಡಿದ್ದಾರೆ.