ರಾಸಾಯನಿಕ ವಿಜ್ಞಾನಿಗಳಾದ ಫ್ರಾನ್ಸ್ ದೇಶದ ಎಮ್ಮಾನುಯೆಲ್ ಚಾರ್ಪೆಂಟೆಯರ್ ಮತ್ತು ಅಮೆರಿಕದ ಜೆನಿಫರ್ ದೌಡ್ನಾ ಅವರಿಗೆ ಈ ಸಾಲಿನ ನೊಬೆಲ್ ಪಾರಿತೋಷಕ ನೀಡಲಾಗಿದೆ. ಜೀನ್ ಅಥವಾ ವಂಶವಾಹಿ ಧಾತುವನ್ನು ಬಹಳ ಕರಾರುವಾಕ್ಕಾಗಿ ಬದಲಿಸಬಲ್ಲ ಅಥವಾ ತಿದ್ದುಪಡಿ ಮಾಡಬಲ್ಲ ವಿಶೇಷ ತಂತ್ರಜ್ಞಾನವನ್ನು ಇವರು ಅಭಿವೃದ್ಧಿಪಡಿಸಿದ್ದರು. ಇವರ ಸಾಧನೆಯನ್ನು ಗುರುತಿಸಿ ವಿಶ್ವದ ಅತ್ಯುಚ್ಛ ಗೌರವವನ್ನು ಇವರಿಗೆ ನೀಡಲಾಗಿದೆ. 51 ವರ್ಷದ ಚಾರ್ಪೆಂಟೆಯೆರ್ ಮತ್ತು 56 ವರ್ಷದ ದೌಡ್ನಾ ಇಬ್ಬರೂ ಮಹಿಳೆಯರೇ ಆಗಿದ್ದಾರೆ. ಇವರಿಬ್ಬರು ಸೇರಿ ಇದೂವರೆಗೂ ರಾಸಾಯನಿಕ ವಿಭಾಗದಲ್ಲಿ ಏಳು ಮಹಿಳೆಯರು ಮಾತ್ರ ನೊಬೆಲ್ ಬಹುಮಾನ ಪಡೆದಿದ್ದಾರೆ.
ಇವರು ರೂಪಿಸಿದ ತಂತ್ರಜ್ಞಾನವನ್ನು CRISP-Cas9 ಎಂದು ಕರೆಯಲಾಗುತ್ತದೆ. ಆಗಲೇ ಇದ್ದ CRISP ಎಂಬ ಜೀನ್ ಎಡಿಟಿಂಗ್ ವ್ಯವಸ್ಥೆಯನ್ನು ಇವರು ಮರುರಚನೆ ಮಾಡಿ ಸರಳೀಕೃತಗೊಳಿಸಿದ್ದಾರೆ. ಇವರ ತಂತ್ರಜ್ಞಾನದಿಂದ ಅನುವಂಶಿ ಧಾತುವನ್ನು ಬಹಳ ನಿಖರವಾಗಿ ತಿದ್ದಲು ಸಾಧ್ಯವಾಗುತ್ತದೆ. ಅನುವಂಶಿಕವಾಗಿ ಬರುವ ಕ್ಯಾನ್ಸರ್ನಂಥ ಮಾರಕ ರೋಗಗಳನ್ನ ಹೋಗಲಾಡಿಸಲು ಇವರ ಜೀನ್ ಎಡಿಟಿಂಗ್ ಸಾಧನ ಬಹಳ ಉಪಯೋಗಕ್ಕೆ ಬರಲಿದೆ. ಪಿಎಫ್‌ಐ ನಂಟು: ಹಾಥ್ರಸ್ಗೆ ಹೋಗುವಾಗ ಬಂಧಿತರಾಗಿದ್ದ ನಾಲ್ವರ ವಿರುದ್ಧ ದೇಶದ್ರೋಹ ಪ್ರಕರಣ
ಚಾರ್ಪೆಂಟಿಯೆರ್ ಅವರು ಹಾನಿಕಾರಕ ಬ್ಯಾಕ್ಟೀರಿಯಾದ ಬಗ್ಗೆ ಅಧ್ಯಯನ ನಡೆಸುವಾಗ ಒಂದು ಹೊಸ ಕಣ (Molecule) ಪತ್ತೆಯಾಗುತ್ತದೆ. ಇಂಥದ್ದೊಂದು ಕಣ ಪತ್ತೆಯಾಗಿದ್ದು ಅದೇ ಮೊದಲು. ಈ ಕಣವು ಬ್ಯಾಕ್ಟೀರಿಯಾದಲ್ಲಿ ಬಹಳ ಹಿಂದಿನಿಂದ ಇದ್ದ ರಕ್ಷಣಾ ವ್ಯವಸ್ಥೆಯ ಒಂದು ಪ್ರಮುಖ ಭಾಗವಾಗಿತ್ತು. ವೈರಸ್ನ ಡಿಎನ್ಎಯ ಕೆಲ ಭಾಗಗಳನ್ನ ಕತ್ತರಿಸಿಹಾಕಿ ಅದನ್ನು ನಿಷ್ಪ್ರಯೋಜಕವನ್ನಾಗಿ ಮಾಡುತ್ತಿತ್ತು ಈ ಬ್ಯಾಕ್ಟೀರಿಯಾದ ಕಣ. ಇದರ ಮೇಲೆ ಹೆಚ್ಚಿನ ಸಂಶೋಧನೆ ನಡೆಸಿದ ಚಾರ್ಪೆಂಟಿಯೆರ್ 2011ರಲ್ಲಿ ತಮ್ಮ ಸಂಶೋಧನೆಯ ವರದಿ ಮಂಡಿಸುತ್ತಾರೆ. ನಂತರ ದೌಡ್ನಾ ಅವರ ಜೊತೆಗೂಡಿ ಚಾರ್ಪೆಂಟೆಯೆರ್ ಅವರು ಬ್ಯಾಕ್ಟೀರಿಯಾದ ಈ ವಂಶವಾಹಿ ಕತ್ತರಿ ಸಾಧನವನ್ನು ಮರುಸೃಷ್ಟಿಸಿ ಅದನ್ನ ಸರಳಗೊಳಿಸಿ ಪ್ರಯೋಗ ಮಾಡುತ್ತಾರೆ. ಡಿಎನ್ಎ ಕಣವನ್ನ ಎಲ್ಲಿ ಬೇಕಾದರೂ ತಿದ್ದುಪಡಿ ಮಾಡಿ ಜೀವದ ಪಥವನ್ನ ಬದಲಿಸುವಂಥ ಸಾಮರ್ಥ್ಯಕ್ಕೆ ಎಡೆ ಮಾಡಿಕೊಡುತ್ತಾರೆ.
Nobel Prize: ಬ್ಲ್ಯಾಕ್ ಹೋಲ್ ಸಂಶೋಧನೆ; ಮೂವರಿಗೆ ಭೌತ ವಿಜ್ಞಾನ ನೊಬೆಲ್
ಇವರ ಈ ತಂತ್ರಜ್ಞಾನ ಕೇವಲ ಮನುಷ್ಯರ ರೋಗಗಳಷ್ಟೇ ಅಲ್ಲ, ರೈತರ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ತುಂಬಲು ನೆರವಾಗುತ್ತದೆ. ಹಾಗೆಯೇ, ಇವರ ತಂತ್ರಜ್ಞಾನವನ್ನ ದುಷ್ಕರ್ಮಿಗಳು ಮುಂದಿನ ದಿನಗಳಲ್ಲಿ ದುರಪಯೋಗಿಸಿಕೊಂಡು ಮಾನವ ಕುಲಕ್ಕೆ ಸಂಚಕಾರ ತಂದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.