ಜ್ಯುವೆಲರಿ ಅಂಗಡಿಗೆ ನುಗ್ಗಿ ಮಾಲೀಕನ ಕಟ್ಟಿಹಾಕಿ 3.5 ಕೆಜಿ ಚಿನ್ನ ದರೋಡೆ..!

0

ಆಭರಣಕೊಳ್ಳುವ ನೆಪದಲ್ಲಿ ಜ್ಯುವೆಲರಿ ಅಂಗಡಿಗೆ ಬಂದ ಇಬ್ಬರು ದರೋಡೆಕೋರರು ಅಂಗಡಿ ಮಾಲೀಕನಿಗೆ ಪಿಸ್ತೂಲು ತೋರಿಸಿ ಬೆದರಿಸಿ ಬಾಯಿಗೆ ಬಟ್ಟೆ ತುರುಕಿ, ಕೈ-ಕಾಲು ಕಟ್ಟಿಹಾಕಿ ಕೋಟ್ಯಂತರ ಮೌಲ್ಯದ ಮೂರೂವರೆ ಕೆಜಿ ಚಿನ್ನಾಭರಣವನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಎಂಇಎಸ್ ರಸ್ತೆಯಲ್ಲಿನ ಬಿಇಎಲ್ ಸರ್ಕಲ್‍ಸಮೀಪ ವಿನೋದ್ ಬ್ಯಾಂಕರ್ಸ್ ಆಯಂಡ್ ಜ್ಯುವೆಲರ್ಸ್ ಎಂಬ ಅಂಗಡಿ ಇದ್ದು, ನಿನ್ನೆ ಬೆಳಗ್ಗೆ ಅಂಗಡಿಯಲ್ಲಿ ಮಾಲೀಕ ರಾಹುಲ್ ಜೈನ್ ಇದ್ದರು. ಈ ಸಂದರ್ಭದಲ್ಲಿ ಬೈಕ್‍ನಲ್ಲಿ ಇಬ್ಬರು ಬಂದಿದ್ದಾರೆ.

ಆಭರಣ ಕೊಳ್ಳುವ ನೆಪದಲ್ಲಿ ಒಳಗೆ ಬಂದ ಇವರು ಸರ ಬೇಕೆಂದು ಕೇಳಿದ್ದಾರೆ. ಸರ ತೋರಿಸಿದಾಗ ಸರ ಬೇಡ ಉಂಗುರ ತೋರಿಸಿ ಎಂದು ಹೇಳಿದಾಗ ರಾಹುಲ್ ಜೈನ್ ಅವರು ಉಂಗುರ ತರಲು ಒಳಗೆ ಹೋಗುತ್ತಿದ್ದಂತೆ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಪಿಸ್ತೂಲು ತೋರಿಸಿ ಬೆದರಿಸಿ ಅವರ ಬಾಯಿಗೆ ಬಟ್ಟೆ ತುರುಕಿ, ಕೈ-ಕಾಲು ಕಟ್ಟಿ ಹಾಕಿದ್ದಾರೆ.

ನಂತರ ಅಂಗಡಿಯಲ್ಲಿದ್ದ ಸುಮಾರು ಒಂದು ಕೋಟಿಗೂ ಹೆಚ್ಚು ಬೆಲೆ ಬಾಳುವ ಮೂರುವರೆ ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಕೆಲ ಸಮಯದ ಬಳಿಕ ರಾಹುಲ್ ಜೈನ್ ಅವರು ಕೈ-ಕಾಲಿಗೆ ಕಟ್ಟಿದ ಕಟ್ಟನ್ನು ಬಿಚ್ಚಿಕೊಂಡು ಹೊರಗೆ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಅಂಗಡಿಯನ್ನು ಪರಿಶೀಲಿಸಿ ಸುತ್ತಮುತ್ತಲಿನ ಸಿಸಿ ಟಿವಿಯ ಪುಟೇಜ್ ಪಡೆದು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ. ಜಾಲಹಳ್ಳಿ ಠಾಣೆ ಪೊಲೀಸರು ದರೋಡೆ ಪ್ರಕರಣ ದಾಖಲಿಸಿಕೊಂಡು ದರೋಡೆಕೋರರಿಗಾಗಿ ಶೋಧ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here