ಟಾಪರ್ ಆಗಬೇಕಿದ್ದ ಮಂಡ್ಯದ ವಿದ್ಯಾರ್ಥಿನಿ ಎಸ್​ಎಸ್​ಎಲ್​ಸಿಯಲ್ಲಿ ಫೇಲ್; ಪರೀಕ್ಷಾ ಮಂಡಳಿಯ ಎಡವಟ್ಟು ಬಯಲು

0

ಆಕೆ ಪ್ರತಿಭಾನ್ವಿತ ವಿದ್ಯಾರ್ಥಿನಿ. ಈ ಬಾರಿಯ SSLC ಪರೀಕ್ಷೆಯಲ್ಲಿ ಶಾಲೆಗೆ ಟಾಪರ್ ಆಗುತ್ತಾಳೆ ಎಂದು ಆ ಶಾಲೆಯ ಆಡಳಿತ ಮಂಡಳಿ ಸೇರಿದಂತೆ ಪೋಷಕರು ಭರವಸೆ ಇಟ್ಟುಕೊಂಡಿದ್ದರು. ಆದರೆ, ಎಸ್​ಎಸ್​ಎಲ್​ಸಿ ಪರೀಕ್ಷಾ ಮಂಡಳಿಯ ಎಡವಟ್ಟಿನಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಅನ್ಯಾಯವಾಗಿದ್ದು, ಪರೀಕ್ಷೆಯಲ್ಲಿ ಫೇಲ್ ಆಗಿದ್ದಾಳೆ. ಇದರಿಂದ ಆತಂಕಗೊಂಡ ಪೋಷಕರು ಪರೀಕ್ಷಾ ಮಂಡಳಿಯಿಂದ ನಕಲಿ ಉತ್ತರ ಪತ್ರಿಕೆಯನ್ನು ಪಡೆದಾಗ ಮಂಡಳಿಯ ಎಡವಟ್ಟು ಬಹಿರಂಗವಾಗಿದೆ.

ಇವರ ಹೆಸರು ಶಿವಕುಮಾರ್. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ‌ ಗೆಂಡೆಹೊಸಳ್ಳಿ ಗ್ರಾಮದವರು. ಇವರ ಮಗಳು ಅಶ್ವಿನಿ ತರೀಪುರ ಗ್ರಾಮದ ವಿನಾಯಕ ವಿದ್ಯಾಸಂಸ್ಥೆಯಲ್ಲಿ SSLC ವ್ಯಾಸಂಗ ಮಾಡುತ್ತಿದ್ದು, ಮಹದೇವಪುರದ ಆನಂದ ಆಳ್ವಾರ್ ಶಾಲೆಯಲ್ಲಿ ಈ ಬಾರಿಯ SSLC ಪರೀಕ್ಷೆಯನ್ನು ಬರೆದಿದ್ದಳು. ಶಾಲೆಯಲ್ಲಿ ಸಾಕಷ್ಟು ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಅಶ್ವಿನಿ ಈ ಬಾರಿ ಶಾಲೆಗೆ ಟಾಪರ್ ಆಗುತ್ತಾಳೆ ಎಂದು ಶಾಲೆಯ ಶಿಕ್ಷಕರು ಸೇರಿದಂತೆ ಪೋಷಕರು ಭರವಸೆ ಇಟ್ಟುಕೊಂಡಿದ್ದರು. ಆದರೆ, ರಿಸಲ್ಟ್​ ಬಂದಾಗ ಈಕೆ ಫೇಲ್ ಆಗಿದ್ದಳು. ಆಂಗ್ಲ ಭಾಷೆಯಲ್ಲಿ-89, ವಿಜ್ಞಾನ-51, ಗಣಿತ-48, ಹಿಂದಿ-33, ಸಮಾಜ ವಿಜ್ಞಾನದಲ್ಲಿ-7 ಹಾಗೂ ಕನ್ನಡದಲ್ಲಿ ಕೇವಲ 4 ಅಂಕ ಬಂದಿತ್ತು.

ಇದರಿಂದ ಕಂಗಾಲಾದ ವಿದ್ಯಾರ್ಥಿನಿಯ ಪೋಷಕರು ಪರೀಕ್ಷಾ ಮಂಡಳಿಯಿಂದ ಉತ್ತರ ಪತ್ರಿಕೆ ನಕಲು ಪಡೆದಾಗ ಪರೀಕ್ಷಾ ಮಂಡಳಿಯ ಎಡವಟ್ಟು ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯ ಸಮಾಜ ವಿಜ್ಞಾನದ ಉತ್ತರ ಪತ್ರಿಕೆಯಲ್ಲಿ ಮೂರು ರೀತಿಯ ಕೈ ಬರಹದ ಉತ್ತರ ಪತ್ರಿಕೆ ಇದ್ದರೆ ಕೆಲವೊಂದು ವಿಷಯದ ಉತ್ತರ ಪತ್ರಿಕೆಯ ಹೆಚ್ಚುವರಿ ಹಾಳೆ ನಾಪತ್ತೆಯಾಗಿತ್ತು. ಇದರಿಂದ ಕಂಗಾಲಾಗಿರುವ ಕುಟುಂಬ ಇದೀಗ ನ್ಯಾಯಕ್ಕಾಗಿ ಪರೀಕ್ಷಾ ಮಂಡಳಿಗೆ ದೂರು ನೀಡಿದೆ. ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಈ ರೀತಿ ಆಗಿರೋದು ಶಾಲೆಯ ಮುಖ್ಯ ಶಿಕ್ಷಕರಿಗೂ ಅಚ್ಚರಿ ಮೂಡಿಸಿದ್ದು, ಶಾಲೆಯಿಂದ ಕೂಡ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿರೋದಾಗಿ ತಿಳಿಸಿದ್ದಾರೆ.

ಇನ್ನು, ಈ ಪ್ರತಿಭಾನ್ವಿತ ವಿದ್ಯಾರ್ಥಿಯ ಈ ಫಲಿತಾಂಶದಲ್ಲಿ ಪರೀಕ್ಷಾ ಮಂಡಳಿಯ ಎಡವಟ್ಟು ಆಗಿರೋದು ಖಚಿತವಾಗುತ್ತಿದ್ದಂತೆ ಶ್ರೀರಂಗಪಟ್ಟಣ ಬಿಇಒ ಶಾಲೆಯ ಅಧಿಕಾರಿ ಗಳೊಂದಿಗೆ ತುರ್ತು ಸಭೆ ನಡೆಸಿದರು. ಆ ದಿನ‌ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರು‌ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿಚಾರಣೆ ನಡೆಸಿ ಲೋಪ ಎಲ್ಲಿ ಆಗಿದೆ ಎಂಬ ಬಗ್ಗೆ ವಿಚಾರಣೆ ನಡೆಸಿದರು. ಪ್ರತಿಭಾನ್ವಿತ ವಿದ್ಯಾರ್ಥಿನಿಯ ಉತ್ತರ ಪತ್ರಿಕೆಯ ನಕಲುಗಳನ್ನು ನೋಡಿದ ಬಿಇಒ ಮೇಲ್ನೋಟಕ್ಕೆ ತಪ್ಪು ಆಗಿರೋದನ್ನು ಒಪ್ಪಿಕೊಂಡು ಮೇಲಧಿಕಾರಿಗೆ ಈ ವಿಷಯ ತಿಳಿಸಿದ್ದು ವಿಚಾರಣೆ ಹಾಗೂ ಪರಿಶೀಲನೆ ‌ನಡೆಸಿ ಈ ನೊಂದ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸಲಾಗುವುದು ಎಂದಿದ್ದಾರೆ.
SSLC ಪರೀಕ್ಷಾ ಮಂಡಳಿಯ ಈ ಎಡವಟ್ಟಿನಿಂದ ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಭವಿಷ್ಯಕ್ಕೆ ಕಂಟಕ ತಂದಿದೆ. ಇನ್ನಾದರೂ SSLC ಪರೀಕ್ಷಾ ಮಂಡಳಿ ಎಚ್ಚೆತ್ತು ಆಗಿರೋ ಅನ್ಯಾಯವನ್ನು ಸರಿಪಡಿಸಿ ತಪ್ಪು ಮಾಡಿದವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಂಡು, ಮಾನಸಿಕವಾಗಿ ನೊಂದಿರುವ ಆ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸಬೇಕಿದೆ.

LEAVE A REPLY

Please enter your comment!
Please enter your name here