ಡಿಸಿಎಂ ಲಕ್ಷ್ಮಣ ಸವದಿ ರಾಜಭವನಕ್ಕೆ ಹೋಗಿದ್ದೇಕೆ..? ಆ ಹನ್ನೆರಡು ನಿಮಿಷಗಳು

0

ಡಿಸಿಎಂ ಲಕ್ಷ್ಮಣ ಸವದಿ ರಾಜಭವನಕ್ಕೆ ಹೋಗಿದ್ದೇಕೆ..? ಆ ಹನ್ನೆರಡು ನಿಮಿಷಗಳು..!

ಬೆಂಗಳೂರು: ಮೊನ್ನೆ ಸಂಜೆ ಉಪಮುಖ್ಯಮಂತ್ರಿ ಲಕ್ಷ್ಮಣ್​ ಸವದಿ ಇದ್ದಕ್ಕಿದ್ದಂತೆ ರಾಜಭವನಕ್ಕೆ ತೆರಳಿದ್ರು. ಸಣ್ಣ ಸುಳಿವೂ ಇಲ್ಲದೇ ಇದ್ದಕ್ಕಿದ್ದಂತೆ ಲಕ್ಷ್ಮಣ ಸವದಿ ರಾಜಭವನಕ್ಕೆ ಹೋಗಿದ್ದೇಕೆ ಅನ್ನೋ ಕುತೂಹಲ ರಾಜ್ಯ ಬಿಜೆಪಿ ನಾಯಕರಿಗೂ ಕಾಡ್ತಿದೆ. ಅಸಲಿಗೆ ಸವದಿ ರಾಜ್ಯಪಾಲರನ್ನ ಭೇಟಿ ಮಾಡಿದ್ದೇಕೆ? ಅವರು ರಾಜ್ಯಪಾಲರ ಜೊತೆ ಏನು ಮಾತನಾಡಿದ್ರು ? ಅಲ್ಲಿ ನಡೆದಿದ್ದೇನು..?

ನಿಮಗೆ ಆಶ್ಚರ್ಯ ಆಗಬಹುದು.. ಲಕ್ಷ್ಮಣ ಸವದಿ ರಾಜಭವನಕ್ಕೆ ತಾವಾಗಿ ಹೋಗಿದ್ದಲ್ಲ, ಉಪಮುಖ್ಯಮಂತ್ರಿ ಸವದಿಗೆ ರಾಜ್ಯಪಾಲರೇ ಸ್ವತಃ ಬುಲಾವ್ ಕೊಟ್ಟಿದ್ದರು. ಹೌದು, ಸಂಜೆ ಐದು ಗಂಟೆಯ ವೇಳೆಗೆ ಗವರ್ನರ್ ವಜೂಭಾಯ್ ವಾಲಾ ಅವರಿಂದ ಬಂದ ಕರೆಗೆ ಓಗೊಟ್ಟು ಕೇವಲ ಹತ್ತೇ ನಿಮಿಷದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸಂಗಪ್ಪ ಸವದಿ ರಾಜಭವನಕ್ಕೆ ತೆರಳಿದ್ರು.

ಆ ಹನ್ನೆರಡು ನಿಮಿಷಗಳು
ರಾಜಭವನದಲ್ಲಿ ಲಕ್ಷ್ಮಣ ಸವದಿ ಸುಮಾರು 12 ನಿಮಿಷ ಮಾತುಕತೆ ನಡೆಸಿದ್ದಾರೆ. ಮೊದಲಿಗೆ ಉಭಯ ಕುಶಲೋಪರಿ, ಹಾಗೇ ಸರ್ಕಾರದ ಆಗು ಹೋಗುಗಳ ಬಗ್ಗೆ ರಾಜ್ಯಪಾಲರ ಜೊತೆ ಸವದಿ ಚರ್ಚೆ ನಡೆಸಿದ್ದಾರೆ. ಹಾಗೆಯೇ ರಾಜ್ಯ ಸರ್ಕಾರ ಕೋವಿಡ್19 ನಿರ್ವಹಣೆ ಮಾಡುತ್ತಿರುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಸುಮಾರು 9 ನಿಮಿಷ ಇದನ್ನೇ ಮಾತನಾಡಿದ್ದಾರೆ.

10ನೇ ನಿಮಿಷ ಹೊರ ಬಂತು ಅಸಲೀ ವಿಷಯ
ಒಂದೇ ಉಸಿರಿಗೆ ಒಂಭತ್ತು ನಿಮಿಷ ಮಾತನಾಡಿ ಮಾತು ನಿಲ್ಲಿಸಿದ ಲಕ್ಷ್ಮಣ್​ ಸವದಿ ಅವರಿಗೆ ರಾಜ್ಯಪಾಲರು ಹೇಳಿದ್ದು ಒಂದು ಮಾತು. ‘ಸಮಾಧಾನ ಮಾಡಿಕೊಳ್ಳಿ’ ಅನ್ನೋದು. ಹಾಗೆಂದ ಕೂಡಲೇ ಸವದಿ ಗಂಭೀರವಾಗಿದ್ದಾರೆ.

ಮುಂದಿನ ದಿನಗಳಲ್ಲಿ ಬಹಳ ಜಾಗೃತೆಯಾಗಿರಿ. ಸೋಮವಾರವೇ ದೆಹಲಿಗೆ ಹೋಗಿ. ರಾಜ್ಯ ರಾಜಕಾರಣದಲ್ಲಿ ಮುಂದೆ ಬಹಳ ಬೆಳವಣಿಗೆಗಳು ಕಾದಿವೆ. ಒಮ್ಮೆ ವರಿಷ್ಠರ ಭೇಟಿ ಮಾಡಿ ಬನ್ನಿ ಎಂದು ಸೂಕ್ಷ್ಮವಾಗಿ, ಸೂಚ್ಯವಾಗಿ ಹೇಳಿದ ರಾಜ್ಯಪಾಲ ವಜೂಭಾಯ್ ವಾಲಾ, ರಾಜ್ಯ ರಾಜಕಾರಣದಲ್ಲಿ ಮುಂದೆ ಆಗಬಹುದಾದ ರಾಜಕೀಯ ಬೆಳವಣಿಗೆಗಳ ಹಿನ್ನಲೆಯಲ್ಲಿ ದೆಹಲಿ ಭೇಟಿ‌ ಅವಶ್ಯ ಎಂದಷ್ಟೇ ಹೇಳಿ ಮಾತು ಮುಗಿಸಿಯೇ ಬಿಟ್ಟರು. ಅಷ್ಟೇ, ಮರು ಮಾತಾಡದೇ ಲಕ್ಷ್ಮಣ ಸವದಿ ತಲೆಯಾಡಿಸಿದರು.

ಕೊನೆಯ ಮೂರು‌ ನಿಮಿಷಗಳಲ್ಲಿ ಡಿಸಿಎಂ ಸವದಿ ಮಾತಾಡಿದ್ದು ಕೇವಲ ಹತ್ತು ಸೆಕೆಂಡ್ ಹಾಗೂ ಒಂದೇ ವಾಕ್ಯ. ‘ಇದೇ ಸೋಮವಾರವೇ ದೆಹಲಿಗೆ ತೆರಳುವೆ’. ಲಕ್ಷ್ಮಣ ಸವದಿಗೆ ಹೇಳಬೇಕಾಗಿದ್ದನ್ನ ಹೇಗೆ ಹೇಳಬೇಕೋ ಹಾಗೆ ಹೇಳಿ, ಎಷ್ಟು ಹೇಳಬೇಕೋ‌ ಅಷ್ಟೇ ಹೇಳಿದರೂ, ಪೂರ್ತಿ ಅರ್ಥ ಮಾಡಿ ಕಳುಹಿಸಿದ್ದಾರೆ ರಾಜ್ಯಪಾಲ ವಜೂಭಾಯ್ ವಾಲಾ.

ರಾಜ್ಯಪಾಲರು ಏನು ಹೇಳಿದರು ಅನ್ನೋದು ಕೇವಲ ಸವದಿ ಅವರಿಗೆ ಅಷ್ಟೇ ಗೊತ್ತು. ಅವರು ಏನು ಹೇಳಿದ್ರು, ಅವರು ದೆಹಲಿಗೆ ಯಾಕೆ ಹೋಗಬೇಕು..? ರಾಜ್ಯ ರಾಜಕಾರಣದಲ್ಲಿ ಸದ್ಯ ಏನು ನಡೆಯುತ್ತೆ ಅನ್ನೋದು ಮಾತ್ರ ಕುತೂಹಲಕರವಾಗೇ ಇದೆ.

LEAVE A REPLY

Please enter your comment!
Please enter your name here