ಕರೊನಾ ವೈರಸ್ ಆತಂಕ ಸೃಷ್ಟಿಸುತ್ತಿರುವುದು ಒಂದೆಡೆಯಾದರೆ ಕರೊನಾ ಪರೀಕ್ಷೆಯ ಮೇಲೆಯೇ ಸಂದೇಹ ಹುಟ್ಟುವಂಥ ಹಲವು ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ.
ಒಬ್ಬರೇ ಎರಡು ಕಡೆ ಪರೀಕ್ಷೆ ಮಾಡಿಸಿದಾಗ ಒಂದು ಆಸ್ಪತ್ರೆ ನೆಗೆಟಿವ್ ಕೊಟ್ಟರೆ, ಇನ್ನೊಂದು ಆಸ್ಪತ್ರೆ ಪಾಸಿಟಿವ್ ಕೊಟ್ಟ ಕೆಲ ಘಟನೆಗಳು ನಡೆದಿವೆ. ಲಕ್ಷಣಗಳೇ ಇಲ್ಲದೇ ಆರಾಮಾಗಿರುವ ವ್ಯಕ್ತಿಗಳಿಗೂ ಪಾಸಿಟಿವ್ ತೋರಿಸುತ್ತಿರುವ ಸಾಕಷ್ಟು ಉದಾಹರಣೆಗಳು ಇವೆ.
ಇವೆಲ್ಲವುಗಳ ನಡುವೆ ಇದೀಗ ಅತ್ಯಂತ ಆತಂಕ ಪಡುವ ಘಟನೆಯೊಂದು ಉತ್ತರ ಪ್ರದೇಶದ ಶಹಾಜಹಾಪುರದಲ್ಲಿ ನಡೆದಿದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರಿಗೆ ಎರಡೆರಡು ಬಾರಿ ಕರೊನಾ ನೆಗೆಟಿವ್ ಎಂದು ವರದಿ ಬಂದಿದ್ದರೂ, ಅವರು ಕರೊನಾಕ್ಕೇ ಬಲಿಯಾಗಿರುವ ಘಟನೆ ಇದು.
ಇನ್ನೂ ಆತಂಕಕಾರಿ ಸಂಗತಿ ಎಂದರೆ ಉಸಿರಾಟದ ಗಂಭೀರ ಸಮಸ್ಯೆ ಇದ್ದರೂ ಅವರಿಗೆ ಎರಡೆರಡು ಬಾರಿ ನೆಗೆಟಿವ್ ಎಂದು ತೋರಿಸಲಾಗಿತ್ತು. ಇನ್ನೇನು ಸಾವಿನ ಅಂತಿಮ ಕ್ಷಣಕ್ಕೆ ಅವರು ಹೋದಾಗ ಇನ್ನೊಂದು ಪರೀಕ್ಷೆ ಮಾಡಲಾಗಿತ್ತು. ಆಗ ಪಾಸಿಟಿವ್ ಎಂದು ತೋರಿಸಿತ್ತು. ಆದರೆ ಅದಾಗಲೇ ಅವರು ಇಹಲೋಕ ತ್ಯಜಿಸಿದ್ದಾರೆ!
47 ವರ್ಷದ ಪೊಲೀಸ್ ಇನ್ಸ್ಪೆಕ್ಟರ್ ಇಂದ್ರಜೀತ್ ಸಿಂಗ್ ಬದೌರಿಯಾ ಕರೊನಾ ಮಾರಿಗೆ ಬಲಿಯಾದವರು. ಕೆಮ್ಮು, ನೆಗಡಿ ಹಾಗೂ ಉಸಿರಾಟದ ಸಮಸ್ಯೆ ಉಲ್ಬಣಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಜುಲೈ 22 ಮತ್ತು ಜುಲೈ 31ರ ನಡುವೆ ಇವರಿಗೆ ಗಂಭೀರವಾದ ಸಮಸ್ಯೆ ತಲೆದೋರಿದ್ದರೂ ಪರೀಕ್ಷೆಯಲ್ಲಿ ನೆಗೆಟಿವ್ ಎಂದೇ ಬಂದಿತ್ತು. ಆದರೆ ಇನ್ನೂ ಉಸಿರಾಟದ ಸಮಸ್ಯೆ ತೀವ್ರಗೊಳ್ಳುತ್ತಿದ್ದಂತೆಯೇ, ಪರಿಸ್ಥಿತಿ ಬಿಗಾಡಿಯಿಸಿದಾಗ ಪರೀಕ್ಷೆ ಮಾಡಿಸಿದ್ದರು. ಆಗ ಅವರನ್ನು ಲಖನೌದ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಗ ಪಾಸಿಟಿವ್ ಎಂದು ತೋರಿಸಿದೆ. ಚಿಕಿತ್ಸೆ ಫಲಕಾರಿಯಾಗದೆ ಇನ್ಸ್ಪೆಕ್ಟರ್ ಕೋವಿಡ್ಗೆ ಬಲಿಯಾಗಿದ್ದಾರೆ.
ಇವರಿಗೆ ಮೊದಲು ಆರ್ಎಟಿ (ರ್ಯಾಪಿಡ್ ಆಯಂಟಿಜೆನ್ ಟೆಸ್ಟ್) ಮಾಡಲಾಗಿತ್ತು. ಇದರಲ್ಲಿ ನೆಗೆಟಿವ್ ಬಂದಿತ್ತು. ಸಾಮಾನ್ಯವಾಗಿ ಇದರಲ್ಲಿ ಬರುವ ವರದಿಯನ್ನು ಶೇ.100ರಷ್ಟು ನಂಬುವುದು ಸಾಧ್ಯವಿಲ್ಲ ಎನ್ನುತ್ತಾರೆ ವೈದ್ಯರು. ಅದು ಹೋಗಲಿ ಎಂದರೆ ತುಂಬಾ ನಂಬುವಂಥ, ನೂರಕ್ಕೆ ನೂರು ಸತ್ಯ ಫಲಿತಾಂಶ ನೀಡುತ್ತದೆ ಎನ್ನಲಾಗುವ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿಯೂ ನೆಗೆಟಿವ್ ಬಂದಿದ್ದು ಬಹಳ ವಿಚಿತ್ರ ಎನ್ನುತ್ತಿದ್ದಾರೆ ವೈದ್ಯರು!
ಉನ್ನಾಂವ್ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಪೊಲೀಸ್ ವೃತ್ತಿ ಆರಂಭಿಸಿದ್ದ ಇಂದ್ರಜಿತ್ ಸಿಂಗ್, ನಂತರ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಕಳೆದ ತಿಂಗಳಷ್ಟೆ ಇನ್ಸ್ಪೆಕ್ಟರ್ ಆಗಿ ಪದೋನ್ನತಿ ಪಡೆದಿದ್ದ ಅವರು, ತಮ್ಮ ಜಿಲ್ಲೆಗೇ ವರ್ಗಾವಣೆಯಾಗಿ ಬಂದಿದ್ದರು. ಅವರು ಪತ್ನಿ ಮತ್ತು ಪುತ್ರ-ಪುತ್ರಿಯನ್ನು ಅಗಲಿದ್ದಾರೆ. ಉತ್ತರ ಪ್ರದೇಶದಲ್ಲಿ ಇದುವರೆಗೂ 1,900 ಮಂದಿ ಬಲಿಯಾಗಿದ್ದಾರೆ.