ತಮಿಳುನಾಡು ವಿಧಾನಸಭಾ ಚುನಾವಣೆ: ನಾಯಕತ್ವಕ್ಕೆ ಸಿಎಂ ವರ್ಸಸ್ ಡಿಸಿಎಂ ವಾರ್ ಶುರು

0

ತಮಿಳುನಾಡು ವಿಧಾನಸಭೆ ಚುನಾವಣೆ ಮುಂದಿನ ವರ್ಷವೇ ಇದ್ದು, ರಾಜಕೀಯ ಪಕ್ಷಗಳು ಸಿದ್ಧತೆಗಳನ್ನಾರಂಭಿಸಿವೆ. ಈ ನಡುವೆ, ಆಡಳಿತಾರೂಢ ಎಐಎಡಿಎಂಕೆ ಈ ಬಾರಿ ಚುನಾವಣೆಯಲ್ಲಿ ಮೇಲೇಳುವ ಲಕ್ಷಣಗಳಿಲ್ಲ. ಸಮರ್ಥ ನಾಯಕತ್ವದ ಕೊರತೆ ಅಲ್ಲಿ ಕಾಡುತ್ತಿದೆ. ಚುನಾವಣೆಗೆ ಪಕ್ಷವನ್ನು ಮುನ್ನಡೆಸುವವರು ಯಾರು ಎಂಬ ವಿಚಾರದಲ್ಲಿ ಮುಖ್ಯಮಂತ್ರಿ ಕೆ.ಪಳನಿಸಾಮಿ ಮತ್ತು ಉಪ ಮುಖ್ಯಮಂತ್ರಿ ಒ ಪನ್ನೀರಸೆಲ್ವಂ ಪರಸ್ಪರ ಕತ್ತಿ ಝಳಪಿಸಿದ್ದಾರೆ.

ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಒ ಪನ್ನೀರ ಸೆಲ್ವಂ ನಿನ್ನೆ ನಡೆದ ಸಭೆಯಲ್ಲಿ ಕೆ.ಪಳನಿಸಾಮಿ ಜತೆಗೆ ವಾಕ್ಸಮರವನ್ನೇ ನಡೆಸಿದ್ದರು. ಇದರ ಬೆನ್ನಿಗೆ ಇಂದು ಮುಖ್ಯಮಂತ್ರಿ ಪಳನಿಸಾಮಿ ಅಧ್ಯಕ್ಷತೆಯ ಕೋವಿಡ್​ 19 ಸಭೆಗೂ ಪನ್ನೀರ ಸೆಲ್ವಂ ಗೈರಾಗಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಇಬ್ಬರೂ ನಾಯಕರು ಪಕ್ಷದೊಳಗೆ ತಮ್ಮ ಬಲ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ.

ಗ್ರೀನ್​ವೇಸ್ ರೋಡ್​ನಲ್ಲಿರುವ ಪನ್ನೀರ ಸೆಲ್ವಂ ನಿವಾಸದಲ್ಲಿ ಅತೃಪ್ತರ ಸಭೆ ನಡೆದಿದ್ದು, ಅಲ್ಲಿ ಪಕ್ಷದ ಡೆಪ್ಯುಟಿ ಕೋಆರ್ಡಿನೇಟರ್ ಕೆ.ಪಿ.ಮುನುಸಾಮಿ, ರಾಜ್ಯಸಭಾ ಸದಸ್ಯ ಆರ್.ವೈತಿಲಿಂಗಂ ಭಾಗವಹಿಸಿದ್ದರು. ಇದಾದ ಬಳಿಕ, ಮಾಧ್ಯಮದವರ ಜತೆಗೆ ಮಾತನಾಡಿದ ವೈತಿಲಿಂಗಂ ಈ ಮೀಟಿಂಗ್​ಗೆ ಅಷ್ಟೇನೂ ಮಹತ್ವ ಕಲ್ಪಿಸಬೇಡಿ. ಸಹಜ ಭೇಟಿಯಷ್ಟೇ ಎಂದು ತೇಪೆ ಹಚ್ಚಿದ್ದಾರೆ.

ಮುಂದಿನ ವರ್ಷ ನಡೆಯುವ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ವೈತಿಲಿಂಗಂ ಹೇಳಿದ್ದಿಷ್ಟೆ- ಅಕ್ಟೋಬರ್ 7ರಂದು ಸಭೆಯಲ್ಲಿ ಅದು ತೀರ್ಮಾನವಾಗಲಿದ್ದು, ಘೋಷಣೆ ಮಾಡಲಾಗುತ್ತದೆ. ಮುಂದಿನ ಚುನಾವಣೆಯಲ್ಲೂ ಎಐಎಡಿಎಂಕೆ ಅಧಿಕಾರ ಚುಕ್ಕಾಣಿಯನ್ನು ಹಿಡಿದುಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

LEAVE A REPLY

Please enter your comment!
Please enter your name here