ತೆರಿಗೆ ಸುಧಾರಣೆಗೆ ಮೋದಿ ಸರ್ಕಾರ ಹೊಸ ಉತ್ತೇಜನ: ಏನಿದು, ಹೇಗಿರಲಿದೆ ಹೊಸ ತೆರಿಗೆ ವ್ಯವಸ್ಥೆ?

0

ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ‘ಪಾರದರ್ಶಕ ತೆರಿಗೆ-ಪ್ರಾಮಾಣಿಕರಿಗೆ ಗೌರವ ವೇದಿಕೆ’ ಉದ್ಘಾಟಿಸುವ ಮೂಲಕ ತೆರಿಗೆ ಸುಧಾರಣೆ ನಿಟ್ಟಿನಲ್ಲಿ ಹೊಸ ಅಧ್ಯಾಯ ಬರೆಯಲು ಮುಂದಾಗಿದ್ದಾರೆ. ಇದರಿಂದ ತೆರಿಗೆ ವ್ಯವಸ್ಥೆ ಸುಧಾರಣೆಯಾಗುವುದಲ್ಲದೆ, ಪಾವತಿ ವಿಧಾನವನ್ನು ಸರಳಗೊಳಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಇನ್ನು ನೇರ ತೆರಿಗೆ ಸುಧಾರಣೆಯ ಮುಂದಿನ ಹಂತವಾದ ತೆರಿಗೆ ಪಾವತಿ ವಿಧಾನದಲ್ಲಿರುವ ಕ್ಲಿಷ್ಟತೆಯನ್ನು ಸರಳಗೊಳಿಸುವ ಮತ್ತು ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಪ್ರಶಂಸೆ, ಕೊಡುಗೆ ನೀಡುವ ತೆರಿಗೆ ಪಾವತಿದಾರರ ಚಾರ್ಟರ್ ಮತ್ತು ಫೇಸ್ ಲೆಸ್ ಮೌಲ್ಯಮಾಪನವನ್ನು ಅನಾವರಣಗೊಳಿಸಿದರು. ಕೋವಿಡ್-19ನ ಆರ್ಥಿಕ ಸಂಕಷ್ಟದ ಈ ಸಮಯದಲ್ಲಿ ಅರ್ಥವ್ಯವಸ್ಥೆಯನ್ನು ಮರು ನಿರ್ಮಾಣ ಮಾಡುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹಾಗಾದರೆ ಹೊಸ ತೆರಿಗೆ ವಿಧಾನದಲ್ಲಿ ಏನೇನಿದೆ ನೋಡೋಣ ಬನ್ನಿ:

1. ಕಳೆದ ಫೆಬ್ರವರಿಯಲ್ಲಿ ನಿರ್ಮಲಾ ಸೀತಾರಾಮನ್ ಹಣಕಾಸು ಬಜೆಟ್ ಮಂಡಿಸುವ ಸಮಯದಲ್ಲಿ ಟ್ಯಾಕ್ಸ್ ಪೇಯರ್ ಚಾರ್ಟರ್, ಫೇಸ್ ಲೆಸ್ ಅಸ್ಸೆಸ್ಸ್ ಮೆಂಟ್, ಫೇಸ್ ಲೆಸ್ ಅಪೀಲ್(faceless assessment, faceless appeal, and taxpayers charter) ಎಂಬ ಸುಧಾರಣೆಗಳನ್ನು ತರುವುದಾಗಿ ಪ್ರಕಟಿಸಿದ್ದರು. ಅಂದರೆ ಇಲ್ಲಿ ಮನುಷ್ಯರ ಮಧ್ಯಪ್ರವೇಶವಿಲ್ಲದೆ ತೆರಿಗೆ ಪಾವತಿದಾರರು ಮತ್ತು ಆದಾಯ ತೆರಿಗೆ ಇಲಾಖೆ ಮಧ್ಯೆ ನೇರವಾಗಿ ಆನ್ ಲೈನ್ ನಲ್ಲಿ ತೆರಿಗೆ ಪಾವತಿ ಮತ್ತು ಇತರ ತೆರಿಗೆಗೆ ಸಂಬಂಧಪಟ್ಟ ಕೆಲಸ ಮಾಡುವ ವಿಧಾನ, ಇದರಿಂದ ಸುಲಭವಾಗಿ, ಸರಳವಾಗಿ, ಪಾರದರ್ಶಕವಾಗಿ, ನಿರ್ಭೀತಿಯಿಂದ ತೆರಿಗೆ ಪಾವತಿ ವಿಧಾನವಾಗುತ್ತದೆ ಮತ್ತು ವ್ಯವಹಾರ ನಡೆಯುತ್ತದೆ.

2. ಪಾರದರ್ಶಕ ತೆರಿಗೆ ವ್ಯವಸ್ಥೆ-ಪ್ರಾಮಾಣಿಕ ಪಾವತಿದಾರರನ್ನು ಗೌರವಿಸುವುದು ಮೋದಿ ಸರ್ಕಾರ ತಂದಿರುವ ತೆರಿಗೆ ಪಾವತಿ ಸುಧಾರಣೆಯಲ್ಲಿನ ಹೊಸ ಹೆಜ್ಜೆ.

3. ತೆರಿಗೆ ಪಾವತಿ ಮಾಡುವವರು ನಿರ್ಭೀತಿಯಿಂದ ಯಾವುದೇ ಅಡೆತಡೆಯಿಲ್ಲದೆ ಆನ್ ಲೈನ್ ನಲ್ಲಿ ಸರಳವಾಗಿ ಪಾವತಿ ಮಾಡಬಹುದು. ಇಲ್ಲಿ ಯಾರು ತೆರಿಗೆ ಕಟ್ಟುತ್ತಾರೆ, ಯಾರು ತೆರಿಗೆ ಅಧಿಕಾರಿ ಒಂದೂ ಗೊತ್ತಾಗುವುದಿಲ್ಲ, ಸಂಪೂರ್ಣವಾಗಿ ಆನ್ ಲೈನ್ ನಲ್ಲಿ.

4. ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಸರ್ಕಾರದಿಂದ ಸೂಕ್ತ ಗೌರವ, ಸ್ಥಾನಮಾನ. ನಿಜವಾದ ತೆರಿಗೆ ಪಾವತಿದಾರರನ್ನು ನಂಬಿಕೆಯಿಂದ ನೋಡಲಾಗುತ್ತದೆ. ನಿಗದಿತ ಕಾಲಮಿತಿಯಲ್ಲಿ ತೆರಿಗೆ ಇಲಾಖೆ ಪ್ರಕ್ರಿಯೆ ಮತ್ತು ಕ್ರಮಗಳನ್ನು ಕೈಗೊಳ್ಳುತ್ತದೆ.

5. ಟ್ಯಾಕ್ಸ್ ಪೇಯರ್ ಚಾರ್ಟರ್(Tax payer charter)ನಡಿ ದೇಶದ ನಾಗರಿಕರಿಗೆ ಕಾಲವಧಿಯಲ್ಲಿ ಸೇವೆ ನೀಡಿ ಅವರನ್ನು ಸಶಕ್ತಗೊಳಿಸುತ್ತದೆ.

6. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಹಲವು ನೇರ ತೆರಿಗೆ ಸುಧಾರಣೆಗಳನ್ನು ಘೋಷಿಸಿದ್ದು ಈಗಿರುವ ಕಂಪೆನಿಗಳ ಮೇಲೆ ಕಾರ್ಪೊರೇಟ್ ತೆರಿಗೆಗಳನ್ನು ಶೇಕಡಾ 30ರಿಂದ ಶೇಕಡಾ 22ಕ್ಕೆ ಇಳಿಸುವುದು, ಹೊಸ ಉತ್ಪಾದನೆ ಘಟಕಗಳು ಮತ್ತು ಲಾಭಾಂಶ ವಿತರಣೆ ತೆರಿಗೆಯನ್ನು ಶೇಕಡಾ 15ಕ್ಕೆ ನಿಗದಿಪಡಿಸಲಾಗಿದೆ.

7. ತೆರಿಗೆ ಸುಧಾರಣೆಯ ಮುಖ್ಯ ಗಮನ ತೆರಿಗೆ ದರವನ್ನು ಕಡಿತಗೊಳಿಸುವುದು ಮತ್ತು ನೇರ ತೆರಿಗೆ ನಿಯಮವನ್ನು ಸರಳಗೊಳಿಸುವುದು. ತೆರಿಗೆ ಇಲಾಖೆಯ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರಲು ಮತ್ತು ದಕ್ಷತೆಯನ್ನು ಕಂಡುಕೊಳ್ಳಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ದಾಖಲೆ ಸಂಖ್ಯೆ ಗುರುತಿಸುವಿಕೆ(ಡಿಐಎನ್) ಅವುಗಳಲ್ಲೊಂದು. ಅಂದರೆ ಇಲಾಖೆಯ ಪ್ರತಿ ವ್ಯವಹಾರ ಕಂಪ್ಯೂಟರ್ ಮೂಲಕ ವಿಶಿಷ್ಟ ದಾಖಲೆ ಸಂಖ್ಯೆ ಗುರುತಿಸುವಿಕೆ ಮೂಲಕ ನಡೆಯುತ್ತದೆ.

8. ತೆರಿಗೆ ಪಾವತಿ ವಿಧಾನ ಸರಳಗೊಳಿಸಲು, ವೈಯಕ್ತಿಕ ತೆರಿಗೆ ಪಾವತಿದಾರರಿಗೆ, ಸ್ಟಾರ್ಟ್ ಅಪ್ ಗಳಿಗೆ ತೆರಿಗೆ ಪಾವತಿ ಸರಳಗೊಳಿಸಲು ಕ್ರಮ.

9. ಬಾಕಿ ಉಳಿದಿರುವ ತೆರಿಗೆ ವಿವಾದ ಬಗೆಹರಿಸಲು ವಿವಾದ್ ಸೆ ವಿಶ್ವಾಸ್ ಕಾಯ್ದೆ 2020 ತರಲಾಗಿದೆ. ಇದರಡಿ ತೆರಿಗೆ ಇಲಾಖೆಗೆ ಸಂಬಂಧಿಸಿದ ವ್ಯಾಜ್ಯ, ವಿವಾದಳ ಬಗೆಹರಿಯುವಿಕೆಯನ್ನು ಬೇಗವಾಗಿ ಮುಗಿಸಲು ಕ್ರಮ ಕೈಗೊಳ್ಳಲಾಗಿದೆ. ತೆರಿಗೆ ಪಾವತಿದಾರರ ದೂರು, ದುಮ್ಮಾನಗಳು, ವ್ಯಾಜ್ಯಗಳು, ಇಲಾಖೆಯ ಸಮಸ್ಯೆಗಳನ್ನು ಬೇಗನೆ ಈ ಕಾಯ್ದೆ ಮೂಲಕ ಬಗೆಹರಿಸಿಕೊಳ್ಳಬಹುದು.

10. ಡಿಜಿಟಲ್ ಟ್ರಾನ್ಸಾಕ್ಷನ್ ಮತ್ತು ಎಲೆಕ್ಟ್ರಾನಿಕ್ ಮಾದರಿಯಲ್ಲಿ ಪಾವತಿಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here