ಸಂಪೂರ್ಣ ತೈಲ ತುಂಬಿದ್ದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶ್ರೀಲಂಕಾ ನೌಕಪಡೆ ಸಹಯೋಗದೊಂದಿಗೆ ಭಾರತೀಯ ನೌಕಪಡೆಯ ಎಂಟು ಹಡಗುಗಳು ಮತ್ತು ಕರಾವಳಿ ರಕ್ಷಣಾ ಪಡೆ ಹರಸಾಹಸ ನಡೆಸುವ ಮೂಲಕ ತೈಲ ಸೋರಿಕೆಯಾಗದಂತೆ ತಡೆಗಟ್ಟಿದ್ದು, ಆಗಬಹುದಾದ ಭಾರೀ ಅನಾಹುತವೊಂದು ತಪ್ಪಿದೆ.
‘ಇದು ಉತ್ತಮ ಸಮನ್ವಯ ಮತ್ತು ಅದ್ಭುತ ಬಹು-ಶಿಸ್ತಿನ ಪ್ರಯತ್ನಗಳ ಕಥೆಯಾಗಿದ್ದು, ಶ್ರೀಲಂಕಾ ನೌಕಪಡೆ ಸಹಯೋಗದೊಂದಿಗೆ ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ಭಾರತೀಯ ನೌಕಪಡೆ ಯಶಸ್ವಿಯಾಗಿ ನ್ಯೂ ಡೈಮಂಡ್ ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ ಎಂದು ಭಾರತೀಯ ತೈಲ ನಿಗಮದ ಮುಖ್ಯಸ್ಥ ಶ್ರೀಕಾಂತ್ ಮಾಧವ್ ವೈದ್ಯ ಹೇಳಿದ್ದಾರೆ.
ನ್ಯೂ ಶಿಪ್ಪಿಂಗ್‌ನಿಂದ ನಿಯಂತ್ರಿಸಲ್ಪಡುವ 20 ವರ್ಷದ ಹಳೆಯ ನ್ಯೂ ಡೈಮಂಡ್ ಹಡಗಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಸುಮಾರು 2,70,000 ಟನ್ ಕುವೈತ್ ಕಚ್ಚಾ ತೈಲವನ್ನು ಮಿನಾ-ಅಲ್-ಅಹ್ಮಾದಿಯಿಂದ ಒಡಿಶಾದ ಪ್ಯಾರಾದೀಪ್ ಗೆ ಸಾಗಿಸಲಾಗುತಿತ್ತು.
ಸೆಪ್ಟೆಂಬರ್ ಮೂರರಂದೇ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶ್ರೀಲಂಕಾ ಪೂರ್ವ ಕರಾವಳಿಯಿಂದ 38 ನ್ಯಾಟಿಕಲ್ ಮೈಲಿ ದೂರದಲ್ಲಿತ್ತು ಎನ್ನಲಾಗಿದ್ದು, ಬೆಂಕಿಯನ್ನು ನಂದಿಸಿರುವುದರಿಂದ 2 ಮಿಲಿಯನ್ ಬ್ಯಾರೆಲ್ ಗಳಷ್ಟು ಕಚ್ಚಾ ತೈಲ ಸುರಕ್ಷಿತವಾಗಿದೆ ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ತೈಲಕ್ಕೆ ಬೆಂಕಿ ಬಿದಿದ್ದರೆ ಭಾರೀ ಪ್ರಾಕೃತಿಕ ವಿಕೋಪ ಉಂಟಾಗುತಿತ್ತು. ತೈಲವೆಲ್ಲಾ ಸಮುದ್ರಕ್ಕೆ ಬೀಳುತಿತ್ತು. ಭಾರತೀಯ ಹಾಗೂ ಶ್ರೀಲಂಕಾ ನೌಕಪಡೆಯಿಂದ ಹರಸಾಹಸದಿಂದ ಇದ್ದು ತಪ್ಪಿದ್ದು, ಹಡಗಿನಲ್ಲಿದ್ದ 21 ಮಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.