ಸರಕಾರಿ ಕೆಲಸ ಕೊಡಿಸುವುದಾಗಿ ಮತ್ತು ಮದುವೆ ಯಾಗುವುದಾಗಿ ನಂಬಿಸಿ, ದಲಿತ ಮಹಿಳೆಗೆ ವಂಚಿಸಿದ ಆರೋಪದಡಿ ಕುಂದಾಪುರ ಪುರಸಭೆ ಮಾಜಿ ಸದಸ್ಯನೋರ್ವನನ್ನು ಕುಂದಾಪುರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕುಂದಾಪುರ ಕೋಡಿ ನಿವಾಸಿ ಸಂದೀಪ್ ಪೂಜಾರಿ (34) ಬಂಧಿತ ಆರೋಪಿ. ಪರಿಶಿಷ್ಟ ಪಂಗಡಕ್ಕೆ ಸೇರಿದ ಶ್ಯಾಮಲಾ ಎಂಬವರ ಪತಿ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟಿದ್ದು ಅವರ ಉದ್ಯೋಗ ವನ್ನು ಶ್ಯಾಮಲಾಗೆ ಕೊಡಿಸುವುದಾಗಿ ಮತ್ತು ಆಕೆಯನ್ನು ಮದುವೆಯಾಗುವುದಾಗಿ ಸಂದೀಪ್ ಪೂಜಾರಿ, ನಂಬಿಸಿ ಹಣ ಪಡೆದಿದ್ದು, ಬಳಿಕ ವಂಚಿಸಿ ಹಣವನ್ನು ವಾಪಾಸ್ಸು ಕೊಡದೆ ಮೋಸ ಮಾಡಿದ್ದಾನೆಂದು ದೂರಲಾಗಿದೆ.
ಈ ಬಗ್ಗೆ ಶ್ಯಾಮಲಾ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.