ಪೂರೈಕೆಯಲ್ಲಿ ಕೊರತೆ ಎದುರಾಗಿರುವುದರಿಂದ ದೆಹಲಿಯಲ್ಲಿ ಟೊಮೆಟೊ ಚಿಲ್ಲರೆ ಮಾರಾಟ ದರ ಶನಿವಾರ ಕೆ.ಜಿಗೆ ಗರಿಷ್ಠ ₹85ಕ್ಕೆ ಏರಿಕೆಯಾಗಿದೆ ಎಂದು ವರ್ತಕರು ಹೇಳಿದ್ದಾರೆ.
ಅಸಂಘಟಿತ ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದ ಮೇಲೆ ₹ 80-85ರ ದರದಲ್ಲಿ ಮಾರಾಟವಾಗುತ್ತಿದೆ. ಆದರೆ, ಸರ್ಕಾರದ ಮಾಹಿತಿಯ ಪ್ರಕಾರ ಕೆ.ಜಿಗೆ ₹ 60ರಷ್ಟಿದೆ.
ಜೂನ್‌ನಲ್ಲಿ ಟೊಮೆಟೊ ದರ ಕೆ.ಜಿಗೆ ₹ 50-60ರ ಆಸುಪಾಸಿನಲ್ಲಿ ಇತ್ತು. ಆದರೆ, ಟೊಮೆಟೊ ಬೆಳೆಯುವ ಪ್ರಮುಖ ರಾಜ್ಯಗಳಿಂದ ಕಡಿಮೆ ಪ್ರಮಾಣದಲ್ಲಿ ಪೂರೈಕೆ ಆಗಿರುವುದರಿಂದ ಈ ವಾರ ದರದಲ್ಲಿ ದಿಢೀರ್ ಏರಿಕೆ ಕಂಡಿದೆ ಎಂದು ತಿಳಿಸಿದ್ದಾರೆ.
ಮದರ್ ಡೇರಿಯ ಸಫಲ್ ಮಳಿಗೆಯಲ್ಲಿ ಟೊಮೆಟೊ ದರ ಕೆ.ಜಿಗೆ 4 78ರಂತೆ ಮಾರಾಟವಾಗುತ್ತಿದೆ. ಆನ್‌ಲೈನ್ ಮಾರಾಟ ಕಂಪನಿ ಗ್ರೋಫರ್ಸ್‌ನಲ್ಲಿ ಕೆ.ಜಿಗೆ ₹ 74-75ರಷ್ಟಿದ್ದರೆ ಬಿಗ್ ಬಾಸ್ಕೆಟ್‌ನಲ್ಲಿ ₹ 60ರಷ್ಟಿದೆ.
ಹಣ್ಣು ಮತ್ತು ತರಕಾರಿಗಳ ಸಗಟು ಮಾರಾಟಕ್ಕೆ ಏಷ್ಯಾದಲ್ಲಿಯೇ ಅತಿದೊಡ್ಡ ಮಾರುಕಟ್ಟೆ ಆಗಿರುವ ಆಜಾದ್‌ಪುರ ಮಂಡಿಯಲ್ಲಿ ಕೆ.ಜಿಗೆ ₹ 40 ರಿಂದ ₹ 60ರಂತೆ ಮಾರಾಟವಾಗುತ್ತಿದೆ.
ಕೋವಿಡ್ ಬಿಕ್ಕಟ್ಟಿನಿಂದಾಗಿ ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದಲ್ಲಿ ರೈತರು ಈ ಬಾರಿ ಕಡಿಮೆ ಪ್ರದೇಶದಲ್ಲಿ ಟೊಮೆಟೊ ಬೆಳೆದಿದ್ದಾರೆ. ಇದರಿಂದಾಗಿ ಬೆಲೆ ಹೆಚ್ಚಾಗುತ್ತಿದೆ ಎಂದು ಆಜಾದ್‌ಪುರ ಮಂಡಿಯ ಟೊಮೆಟೊ ಬೆಳೆಗಾರರ ಒಕ್ಕೂಟದ ಅಶೋಕ್ ಕೌಶಿಕ್ ತಿಳಿಸಿದ್ದಾರೆ.
ವಾರ್ಷಿಕವಾಗಿ 1.97 ಕೋಟಿ ಟನ್ ಟೊಮೆಟೊ ಬೆಳೆಯಲಾಗುತ್ತಿದ್ದು, 1.15 ಕೋಟಿ ಟನ್ ಬಳಕೆಯಾಗುತ್ತಿದೆ.