ಧಾರವಾಡ: ವೇತನ ಕೇಳಿದ್ದಕ್ಕೆ ಚಾಲಕರಿಗೆ ಕೆಲಸ ನಿರಾಕರಣೆ

0

 ‘ಮೂರು ತಿಂಗಳ ಬಾಕಿ ವೇತನ ಪಾವತಿಸುವಂತೆ ಕೇಳಿದ್ದಕ್ಕೆ, ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ 51 ಆಟೊ ಟಿಪ್ಪರ್‌ ಚಾಲಕರಿಗೆ ಕೆಲಸ ನಿರಾಕರಿಸಲಾಗಿದೆ’ ಎಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ದೂರಿದರು.

‘ವೇತನ ಬಿಡುಗಡೆಗಾಗಿ 51 ಕೆಲಸಗಾರರು ಆ. 14ರಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಇದನ್ನೇ ದೊಡ್ಡ ಅಪರಾಧ ಎಂದು ಪರಿಗಣಿಸಿ, ಮಾರನೆಯ ದಿನದಿಂದಲೇ ಅವರಿಗೆ ಕೆಲಸ ಕೊಡುವುದನ್ನು ನಿಲ್ಲಿಸಲಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಚಾಲಕರಿಗೆ ಕೆಲಸ ಕೊಡುವಂತೆ ಮಾಜಿ ಸಚಿವ ಹನುಮಂತಪ್ಪ ಅಲ್ಕೊಡ್ ಸೇರಿದಂತೆ ಅನೇಕರ ಹೇಳಿದರೂ ಆಯುಕ್ತರು ಕಿವಿಗೊಟ್ಟಿಲ್ಲ. ಜಿಲ್ಲಾಧಿಕಾರಿ ಸೂಚನೆಯನ್ನೂ ಪಾಲಿಸಿಲ್ಲ. ಆ. 19ರಂದು ನಡೆದ ಜಿಲ್ಲಾ ಸಫಾಯಿ ಕರ್ಮಚಾರಿಗಳ ಮೇಲ್ವಿಚಾರಣಾ ಸಮಿತಿ ಸಭೆಯನ್ನು ಒಂದು ತಾಸು ಮುಂಚೆ ರದ್ದುಪಡಿಸಿದ್ದಾರೆ. ಸಹಾಯಕ ಕಾರ್ಮಿಕ ಆಯುಕ್ತರು ಎರಡು ಸಲ ಕರೆದಿದ್ದ ಜಂಟಿ ಸಂಧಾನ ಸಭೆಗೂ ಅಧಿಕಾರಿಗಳು ಗೈರಾಗಿದ್ದಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಗುತ್ತಿಗೆದಾರರು ಕಾರ್ಮಿಕ ಇಲಾಖೆಯ ಪರವಾನಗಿ ಪಡೆಯದಿದ್ದರೂ, ಪಾಲಿಕೆಗೆ ಕಾರ್ಮಿಕರನ್ನು ಮತ್ತು ಆಟೊ ಟಿಪ್ಪರ್ ಚಾಲಕರನ್ನು ಪೂರೈಸಿದ್ದಾರೆ. ಕಾನೂನುಬಾಹಿರವಾಗಿ 146 ವಾಹನಗಳ ನಿರ್ವಹಣೆಯನ್ನು ಪಾಲಿಕೆ ಅವರಿಗೆ ನೀಡಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಕೂಡಲೇ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡು, ಬಾಕಿ ವೇತನ ಪಾವತಿಸಬೇಕು’ ಎಂದು ಒತ್ತಾಯಿಸಿದರು.

ಹೊರಗುತ್ತಿಗೆ ಚಾಲಕ ಚಾಲಕ ಚಂದ್ರು ಶಿರಗುಂಪಿ ಮಾತನಾಡಿ, ‘ಆದರ್ಶ ಎಂಟರ್‌ಪ್ರೈಸಸ್‌ನಲ್ಲಿ ಹೊರಗುತ್ತಿಗೆ ಚಾಲಕರಾಗಿ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿರುವ ಚಾಲಕರಿಗೆ ಕನಿಷ್ಠ ವೇತನ, ಇಎಸ್‌ಐ, ಪಿಎಫ್ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ಕೊರೊನಾ ಸೋಂಕಿನಿಂದ ಆಗಸ್ಟ್‌ನಲ್ಲಿ ಧಾರವಾಡದ ಚಾಲಕ ಸುಭಾಷ ತನ್ನಹಳ್ಳಿ ಎಂಬುವರು ಮೃತಪಟ್ಟರು. ಪಾಲಿಕೆಯಿಂದ ಇಲ್ಲಿಯವರೆಗೆ ಅವರ ಕುಟುಂಬಕ್ಕೆ ಯಾವುದೇ ಪರಿಹಾರ ಕೊಟ್ಟಿಲ್ಲ’ ಎಂದರು.

ಜಿಲ್ಲಾ ಸಫಾಯಿ ಕರ್ಮಚಾರಿಗಳ ಮೇಲ್ವಿಚಾರಣಾ ಸಮಿತಿ ಸದಸ್ಯರಾದ ಗಂಗಮ್ಮ ಸಿದ್ರಾಮಪೂರ, ಗಾಳೆಪ್ಪ ದ್ವಾಸಲಕೇರಿ, ಮಂಜುನಾಥ ಮಬ್ಬು ಹಾಗೂ ರಘು ಹೆಬ್ಬಳ್ಳಿ ಇದ್ದರು.

LEAVE A REPLY

Please enter your comment!
Please enter your name here