ಕ್ರಿಕೆಟ್ ತಾರೆಯರಾದ ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮ ಅಭಿಮಾನಿಗಳ ನಡುವೆ ಕೋಲ್ಹಾಪುರ ಜಿಲ್ಲೆಯ ಕುರುಂಡ್‌ವಾಡ್‌ನಲ್ಲಿ ಗಲಾಟೆ ನಡೆದಿದೆ.
ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ವಿದಾಯ ೋಷಿಸಿದ ಬೆನ್ನಲ್ಲೇ ಅವರ ಅಭಿಮಾನಿಗಳು ನಗರದಲ್ಲಿ ಪೋಸ್ಟರ್, ಬ್ಯಾನರ್‌ಗಳನ್ನು ಹಾಕಿದ್ದರು. ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮ ಶನಿವಾರ ಖೇಲ್‌ರತ್ನ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಇದೇ ರೀತಿ ಬ್ಯಾನರ್‌ಗಳನ್ನು ಹಾಕಿದ್ದರು. ಈ ನಡುವೆ ರೋಹಿತ್ ಶರ್ಮ ಅಭಿಮಾನಿಗಳು ಹಾಕಿದ್ದ ಹೋರ್ಡಿಂಗ್ಸ್ ಒಂದನ್ನು ಅಪರಿಚಿತರ ಗುಂಪೊಂದು ಕೆಡವಿ ಹಾಕಿತ್ತು. ಅದರ ಬೆನ್ನಲ್ಲೇ ಇಬ್ಬರು ಕ್ರಿಕೆಟಿಗರ ಅಭಿಮಾನಿಗಳ ಗುಂಪಿನ ನಡುವೆ ಜಗಳ ನಡೆದಿದೆ.
ವಾಗ್ವಾದದೊಂದಿಗೆ ಆರಂಭಗೊಂಡ ಜಗಳ, ಮಾರಾಮಾರಿಗೆ ತಿರುಗಿದೆ. ರೋಹಿತ್ ಶರ್ಮ ಅಭಿಮಾನಿ ಎಂದು ಹೇಳಲಾದ ಯುವಕನೊಬ್ಬ, ಧೋನಿ ಅಭಿಮಾನಿಗಳನ್ನು ಅವಾಚ್ಯವಾಗಿ ನಿಂದಿಸಿದ್ದ. ಅದರ ಬೆನ್ನಲ್ಲೇ ಆತನನ್ನು ಕಬ್ಬಿನ ತೋಟಕ್ಕೆ ಕರೆದೊಯ್ದು ಹಲ್ಲೆ ಮಾಡಲಾಗಿತ್ತು. ಅದರ ಬೆನ್ನಲ್ಲೇ ದೊಡ್ಡ ಗಲಾಟೆ ಏರ್ಪಟ್ಟಿದೆ.
ಧೋನಿ-ರೋಹಿತ್ ಶರ್ಮ ಅಭಿಮಾನಿಗಳ ಗಲಾಟೆ ಟ್ವಿಟರ್‌ನಲ್ಲೂ ದೊಡ್ಡ ಸದ್ದು ಮಾಡಿದ್ದು, ಈ ಬಗ್ಗೆ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಕೂಡ ಕಮೆಂಟ್ ಹಾಕಿದ್ದಾರೆ. ‘ಹುಚ್ಚರೇ ಏನು ಮಾಡುತ್ತಿದ್ದೀರಿ? ಆಟಗಾರರು ಪರಸ್ಪರ ಆತ್ಮೀಯರಾಗಿರುತ್ತಾರೆ, ಇಲ್ಲವೇ ಪರಸ್ಪರ ಹೆಚ್ಚು ಮಾತನಾಡುವುದಿಲ್ಲ. ಅಗತ್ಯವಿರುವಷ್ಟು ಮಾತ್ರ ಅವರು ಮಾತನಾಡುತ್ತಾರೆ. ದಯವಿಟ್ಟು ಜಗಳವಾಡಬೇಡಿ. ಟೀಮ್ ಇಂಡಿಯಾವನ್ನು ಒಂದೇ ಎಂದು ಪರಿಗಣಿಸಿ’ ಎಂದು ಸೆಹ್ವಾಗ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಧೋನಿ ಮತ್ತು ರೋಹಿತ್ ಶರ್ಮ ಇನ್ನು ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಾಯಕರಾಗಿ ಕಣಕ್ಕಿಳಿಯಲಿದ್ದು, ಸೆಪ್ಟೆಂಬರ್ 19ರಂದು ಉದ್ಘಾಟನಾ ಪಂದ್ಯದಲ್ಲಿ ಇವೇ ತಂಡಗಳೆರಡು ಮುಖಾಮುಖಿಯಾಗುವ ನಿರೀಕ್ಷೆ ಇದೆ. ಧೋನಿ ನಿವೃತ್ತಿಯ ಬೆನ್ನಲ್ಲೇ ಟ್ವೀಟ್ ಮಾಡಿದ್ದ ರೋಹಿತ್ ಶರ್ಮ, ಸೆಪ್ಟೆಂಬರ್ 19ರಂದು ಟಾಸ್ ವೇಳೆ ಭೇಟಿಯಾಗೋಣ ಎಂದು ಬರೆದುಕೊಂಡಿದ್ದರು.