ಧೋನಿ ಸ್ಥಾನಕ್ಕೆ ಪಂತ್ ಸೂಕ್ತ: ಆಶಿಶ್ ನೆಹ್ರಾ-ಸಂಜಯ್ ಬಂಗಾರ್ ಅಭಿಪ್ರಾಯ

0

ಮಹೇಂದ್ರ ಸಿಂಗ್‌ ಧೋನಿ ಅವರ ವಿದಾಯದಿಂದಾಗಿ ಟೀಂ ಇಂಡಿಯಾದಲ್ಲಿ ತೆರವಾಗಿರುವ ವಿಕೆಟ್‌ಕೀಪರ್/ಬ್ಯಾಟ್ಸ್‌ಮನ್‌ ಸ್ಥಾನವನ್ನು ತುಂಬಲು ಯುವ ಆಟಗಾರ ರಿಷಭ್‌ ಪಂತ್‌ ಸೂಕ್ತ ಎಂದು ಮಾಜಿ ಕ್ರಿಕೆಟಿಗರಾದ ಆಶಿಶ್‌ ನೆಹ್ರಾ ಮತ್ತು ಸಂಜಯ್‌ ಬಂಗಾರ್‌ ಅಭಿಪ್ರಾಯಪಟ್ಟಿದ್ದಾರೆ.

ಪಂತ್ ಕುರಿತು ಕ್ರೀಡಾವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿರುವ ಬಂಗಾರ್‌, ‘ವಿಕೆಟ್‌ ಕೀಪಿಂಗ್‌ ಬಗ್ಗೆ ಮಾತನಾಡುವುದಾದರೆ, ಪಂತ್‌ ಸೂಕ್ತ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ ಈ ಬಾರಿಯ ಐಪಿಎಲ್‌ನಲ್ಲಿ ಪಂತ್ ಉತ್ತಮ ಆರಂಭ ಪಡೆದಿದ್ದಾರೆ. ಭಾರತದ ಮಧ್ಯಮ ಕ್ರಮಾಂಕದ ವಿಚಾರ ಬಂದಾಗ ಎಡಗೈ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳ ಸಮತೋಲನ ಕಂಡುಕೊಳ್ಳಲು ರಿಷಭ್‌ ಅವರನ್ನು ಪರಿಗಣಿಸುವುದು ಮುಖ್ಯ’ ಎಂದು ಹೇಳಿದ್ದಾರೆ.

ಬಂಗಾರ್ ಅಭಿಪ್ರಾಯಕ್ಕೆ ದನಿಗೂಡಿಸಿರುವ ಆಶಿಶ್‌ ನೆಹ್ರಾ, ‘ನಾವು ಯಾವ ಮಾದರಿಯ ಬಗ್ಗೆ ಮಾತನಾಡುತ್ತಿದ್ದೇವೆ ಎಂಬುದರ ಮೇಲೆ ಈ ವಿಚಾರ ಅವಲಂಬಿತವಾಗಿದೆ. ಒಂದು ವೇಳೆ ನಾವು ಟೆಸ್ಟ್‌ ಕ್ರಿಕೆಟ್‌ ಬಗ್ಗೆ ಮಾತನಾಡುತ್ತಿದ್ದರೆ ಮತ್ತು ಅತ್ಯುತ್ತಮ ವಿಕೆಟ್‌ಕೀಪರ್‌ಗಾಗಿ ಎದುರು ನೋಡುತ್ತಿರುವುದಾದರೆ ನಾಯಕ ಮತ್ತು ಕೋಚ್‌ ಅವರ ಮನಸ್ಥಿತೆಯನ್ನು ಪರಿಗಣಿಸಬೇಕಾಗುತ್ತದೆ. ಸಂಜಯ್‌ ಬಂಗಾರ್‌ ಹೇಳಿರುವ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ. ಪಂತ್‌ ಅವರನ್ನು ಆಡಿಸಬೇಕು. ಅಂತರರಾಷ್ಟ್ರೀಯ ಕ್ರಿಕೆಟ್‌ ಎಂದಮೇಲೆ ನಾವು ಪ್ರತಿಯೊಬ್ಬರಿಗೂ ಬೆಂಬಲ ನೀಡಬೇಕಾಗುತ್ತದೆ’ ಎಂದು ನೆಹ್ರಾ ಹೇಳಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊರೆತಿರುವ ಸಾಕಷ್ಟು ಅವಕಾಶಗಳನ್ನು ರಿಷಭ್‌ ಪಂತ್‌ ಕೈ ಚೆಲ್ಲಿದ್ದಾರೆ. ಹೀಗಾಗಿ ಟೀಂ ಇಂಡಿಯಾದಲ್ಲಿ ವಿಕೆಟ್‌ಕೀಪರ್‌ ಜವಾಬ್ದಾರಿಯನ್ನು ಕೆಎಲ್‌ ರಾಹುಲ್‌ ನಿಭಾಯಿಸುತ್ತಿದ್ದಾರೆ.

ಪಂತ್‌ ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದು, 5 ಪಂದ್ಯಗಳಿಂದ 42.75ರ ಸರಾಸರಿಯಲ್ಲಿ 171 ರನ್‌ ಗಳಿಸಿದ್ದಾರೆ. ಡೆಲ್ಲಿ ತಂಡ 5 ಪಂದ್ಯಗಳಲ್ಲಿ 4 ಜಯ ಸಾಧಿಸಿ ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

LEAVE A REPLY

Please enter your comment!
Please enter your name here