ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವ ಆರೋಪ ಹೊತ್ತು ಸಿಸಿಬಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಮತ್ತು ಆಪ್ತ ರವಿಶಂಕರ್ ನಡುವಿನ ಪರಿಚಯವೇ ಒಂದು ರೋಚಕ ಸಂಗತಿ.
ದಿನವೊಂದಕ್ಕೆ ರಾಗಿಣಿಗೆ ಒಂದು ಲಕ್ಷ ಖರ್ಚು ಮಾಡುತ್ತಿದ್ದೆ ಎಂದು ರವಿಶಂಕರ್ ಹೇಳಿದಾಗಲೇ ಅಧಿಕಾರಿಗಳಿಗೆ ಪರಮಾಶ್ಚರ್ಯವಾಗಿತ್ತು. ಇದರ ಮೂಲವನ್ನು ಬೆನ್ನು ಹತ್ತಿದ ಅಧಿಕಾರಿಗಳಿಗೆ ಕೆಲ ಕುತೂಹಲಕಾರಿ ವಿಚಾರಗಳು ಸಿಕ್ಕಿವೆ.
ಜಯನಗರ ಆರ್ಟಿಒ ಕಚೇರಿಯಲ್ಲಿ ಎಸ್ಡಿಎ ಆಗಿರುವ ರವಿಶಂಕರ್, ಈ ಹಿಂದೆ ಕೋರಮಂಗಲ ಆರ್ಟಿಒದಲ್ಲೂ ಕೆಲಸ ಮಾಡಿದ್ದ. ಅಪ್ಪನ ನಿಧನದ ಬಳಿಕ ಅನುಕಂಪದ ಆಧಾರದಲ್ಲಿ ಕೆಲಸ ಗಿಟ್ಟಿಸಿದ್ದ ರವಿಶಂಕರ್, ಕೆಲಸ ಮಾಡುತ್ತಲೇ ನಟ-ನಟಿಯರಿಗೆ ವಾಹನಗಳ ಫ್ಯಾನ್ಸಿ ನಂಬರ್ ಕೊಡುವಾಗ ಪರಿಚಯ ಬೆಳೆಸುತ್ತಿದ್ದ.
ಬಹುತೇಕ ನಟ ನಟಿಯರಿಗೆ ಈತನೇ ಫ್ಯಾನ್ಸಿ ನಂಬರ್ ಆಯ್ಕೆ ಮಾಡಿಕೊಟ್ಟಿದ್ದಾನೆಂದು ತಿಳಿದುಬಂದಿದೆ. ಅದರಂತೆ ನಟಿ ರಾಗಿಣಿ ಕಾರಿಗೂ ಈತನೇ ಫ್ಯಾನ್ಸಿ ನಂಬರ್ ಆಯ್ಕೆ ಮಾಡಿ ಕೊಟ್ಟಿದ್ದಾನೆ. ಇಲ್ಲಿಂದ ಬೆಳೆದ ಪರಿಚಯ ಪಾರ್ಟಿ ಹಾಗೂ ಪಬ್ಗೆ ಹೋಗುವಷ್ಟು ಹತ್ತಿರವಾಯಿತು.
ನಂತರದ ದಿನಗಳಲ್ಲಿ ನಟಿ ಹೋಗುತ್ತಿದ್ದ ಸಭೆ-ಸಮಾರಂಭಕ್ಕೆ ರವಿಶಂಕರ್ ಜತೆಯಲ್ಲೇ ಹೋಗುತ್ತಿದ್ದ. ಪಾರ್ಟಿಗಳಲ್ಲಿ ಈತನಿಗೆ ಮತ್ತಷ್ಟು ನಟ-ನಟಿಯರ ಸಂಪರ್ಕವಾಗಿತ್ತು. ಹೆಚ್ಚಾಗಿ ನಟಿ ರಾಗಿಣಿ ಜತೆ ಸುತ್ತಾಡುತ್ತಿದ್ದ. ಸಿಸಿಬಿಗೆ ಸಿಕ್ಕ ಸುಳಿವಿನಿಂದ ರವಿಶಂಕರ್ ಮೇಲೆ ಸಿಸಿಬಿ ಕಣ್ಣಿಟ್ಟಿತ್ತು. ಬಳಿಕ ಮೊಬೈಲ್ ಟವರ್ ಆಧಾರದ ಮೇಲೆ ಆತನನ್ನು ವಶಕ್ಕೆ ಪಡೆದಿತ್ತು.
ವಶಕ್ಕೆ ಪಡೆಯುವಾಗ ರವಿಶಂಕರ್ ಎರಡು ಬಾರಿ ಮಿಸ್ ಆಗಿ ಮೂರನೇ ಸಿಸಿಬಿ ಸಿಕ್ಕಿಬಿದಿದ್ದ. ಈತ ನೀಡಿದ ಮಾಹಿತಿ ಆಧಾರದ ಮೇಲೆ ಮತ್ತೊಬ್ಬ ಆರೋಪಿ ರಾಹುಲ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.