ನಟ ಸುಶಾಂತ್ ಸಾವಿನ ಬಗ್ಗೆ ಮಾಹಿತಿ ಇದೆ, ಭದ್ರತೆ ನೀಡಿದರೆ ತಿಳಿಸುತ್ತೇನೆ ಎಂದ ಮಧ್ಯ ಪ್ರದೇಶ ಮಹಿಳೆ

0

 ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಬಳಿ ಪ್ರಮುಖ ಮಾಹಿತಿ ಇದೆ ಎಂದು ಹೇಳಿಕೊಂಡ ಮಧ್ಯ ಪ್ರದೇಶದ ಮಹಿಳೆಯೊಬ್ಬರು, ತನಗೆ ಸೂಕ್ತ ಭದ್ರತೆ ನೀಡಿದರೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಈ ಮಹಿಳೆ ಮುಂಬೈ ನಿವಾಸಿಯಾಗಿದ್ದು, ಪ್ರಸ್ತುತ ಇಂದೋರ್‌ನಲ್ಲಿ ತನ್ನ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದು, ಇತ್ತೀಚೆಗೆ ಮಹಿಳೆ ತಮ್ಮನ್ನು ಭೇಟಿ ಮಾಡಿದ್ದರು ಎಂದು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಹರಿನಾರಾಯಣಾಚಾರಿ ಮಿಶ್ರಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಸುಶಾಂತ್ ಸಿಂಗ್ ರಜಪೂತ್ ತನಗೆ ಬಹಳ ದಿನದಿಂದ ಗೊತ್ತು ಎಂದಿರುವ ಮಹಿಳೆ, ನಟನ ಸಾವಿನ ಬಗ್ಗೆ ಕೆಲವು ಪ್ರಮುಖ ಮಾಹಿತಿ ಹೊಂದಿರುವುದಾಗಿ” ತಿಳಿಸಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ. ಆದರೆ ಆ ಮಹಿಳೆಯ ಗುರುತನ್ನು ಮಿಶ್ರಾ ಅವರು ಬಹಿರಂಗಪಡಿಸಿಲ್ಲ.

“ಸುಶಾಂತ್ ಸಾವಿಗೆ ಸಂಬಂಧಿಸಿದ ವಿಚಾರವನ್ನು ಸೂಕ್ತವಾದ ವೇದಿಕೆಯಲ್ಲಿ ವಾಸ್ತವಿಕ ರೀತಿಯಲ್ಲಿ ಬಹಿರಂಗಪಡಿಸುವುದಾಗಿ ಮಹಿಳೆ ಹೇಳಿದ್ದಾರೆ.

ಮಹಿಳೆ ತನಗೆ ಭದ್ರತೆಯ ಅಗತ್ಯ ಇದೆ ಎಂದು ಹೇಳಿದ್ದು, ನಾವು ಅಗತ್ಯವಿದ್ದಾಗ ಮತ್ತು ತ್ವರಿತವಾಗಿ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದೇವೆ ಎಂದು ಮಿಶ್ರಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here