ನನಗೆ ಐವರು ಗಂಡಂದಿರು, ಮೂವರು ಅಪ್ಪಂದಿರು: ಅನ್ಯೋನ್ಯ ದಾಂಪತ್ಯದ ಗುಟ್ಟು ಬಿಚ್ಚಿಟ್ಟಿದ್ದಾಳೆ ಯುವತಿ.

0

ಒಂದು ಗಂಡಿಗೊಂದು ಹೆಣ್ಣು… ಎಂಬುದು ಹಿಂದೂ ಸಂಪ್ರದಾಯದಲ್ಲಿ ಇರುವ ಮಾತು. ಆದರೆ ಆ ಹೆಣ್ಣು-ಗಂಡುಗಳು ಹೊಂದಿಕೊಂಡು ಬಾಳ್ವೆ ನಡೆಸುವುದೇ ಇದೀಗ ದುಸ್ತರವಾಗಿದೆ. ಅಂಥದ್ದರಲ್ಲಿ ಒಬ್ಬಾಕೆ ಐವರನ್ನು ಮದುವೆಯಾದರೆ?

ಇಂಥ ಪ್ರಕರಣಗಳನ್ನು ನೀವು ಕೇಳಿರಲಿಕ್ಕೆ ಸಾಕು. ಗಂಡಸರನ್ನು ವಂಚಿಸುವ ಉದ್ದೇಶದಿಂದ ಖತರ್ನಾಕ್​ ಕಳ್ಳಿಯರು ಹಲವು ಮದುವೆಯಾಗಿ ಮೋಸ ಮಾಡಿರುವ ಕೆಲವು ಸುದ್ದಿಗಳು ಇದಾಗಲೇ ವರದಿಯಾಗಿದ್ದು ಇದೆ ಅನ್ನಿ. ಆದರೆ ಇಲ್ಲಿ ಹೇಳುತ್ತಿರುವುದು ಅಂಥ ಅಪರಾಧಿಕ ವರದಿಗಳ ಬಗ್ಗೆ ಅಲ್ಲ. ಬದಲಿಗೆ ಸಂಪ್ರದಾಯಬದ್ಧವಾಗಿ, ಶಾಸ್ತ್ರೋಕ್ತವಾಗಿ ಐವರನ್ನು ಮದುವೆಯಾಗಿರುವ ಯುವತಿಯ ಬಗ್ಗೆ.

ಮಹಾಭಾರತದಲ್ಲಿ ಪಂಚ ಪಾಂಡವರನ್ನು ಗಂಡನಾಗಿಸಿಕೊಂಡಿರುವ ದ್ರೌಪದಿಯ ಬಗ್ಗೆ ಎಲ್ಲರಿಗೂ ತಿಳಿದದ್ದೇ. ಐವರು ಗಂಡಂದಿರ ಜತೆಯೂ ದ್ರೌಪದಿ ಹೊಂದಿಕೊಂಡು ಸಂಸಾರ ಮಾಡಿರುವುದು ಎಲ್ಲರಿಗೂ ಆದರ್ಶವೇ. ಅಂತೆಯೇ ಆ ಐದು ಮಂದಿ ಕೂಡ ದ್ರೌಪದಿಯ ಜತೆಗೆ ಹೊಂದಿಕೊಂಡಿರುವುದು ಕೂಡ.

ಅಂಥದ್ದೇ ಒಬ್ಬ ‘ಆಧುನಿಕ ದ್ರೌಪದಿ’ ರಾಜೋ. ಡೆಹ್ರಾಡೂನ್‌ನವಳು, ಸಮೀಪದ ಹಳ್ಳಿಯೊಂದರಲ್ಲಿ ತನ್ನ ಐದು ಮಂದಿ ಪತಿಯರೊಂದಿಗೆ ವಾಸವಾಗಿದ್ದಾಳೆ. ಐವರು ಗಂಡಂದಿರ ಜತೆ ಈಕೆಯದ್ದು ಸುಖೀ ಸಂಸಾರವಂತೆ. ಎಲ್ಲಾ ಪತಿಯರು ತನ್ನನ್ನು ತುಂಬಾ ಪ್ರೀತಿಸುತ್ತಿರುವ ಕಾರಣ ನಾನು ತುಂಬಾ ಅದೃಷ್ಟವಂತೆ ಎಂದು ಆಕೆ ಹೇಳಿದ್ದಾಳೆ.

ಐದು ಮಂದಿ ಗಂಡಂದಿರ ಜತೆಯೂ ನಾನು ಸಮನಾಗಿ ಕಾಲ ಕಳೆಯುತ್ತೇನೆ. ಅದರಿಂದಾಗಿ ಯಾರಿಗೂ ಯಾರ ಬಗ್ಗೆಯೂ ಅಸೂಯೆ ಇಲ್ಲ. ಎಲ್ಲರೂ ಚೆನ್ನಾಗಿ ಒಂದೇ ಮನೆಯಲ್ಲಿ ವಾಸವಿದ್ದೇವೆ ಎನ್ನುತ್ತಾಲೆ ರಾಜೋ.

ಅಷ್ಟಕ್ಕೂ ಈ ಕುಟುಂಬವು ತಲೆತಲಾಂತರಗಳಿಂದ ದ್ರೌಪದಿಯ ಆದರ್ಶಗಳನ್ನು ನಡೆಸುಕೊಂಡು ಬಂದಿದೆಯಂತೆ. ಅಂದರೆ ಇಲ್ಲಿ ಒಂದು ಹೆಣ್ಣು ಒಂದೇ ಕುಟುಂಬದ ಅಣ್ಣ-ತಮ್ಮಂದಿರನ್ನು ಮದುವೆಯಾಗಲು ಅವಕಾಶವಿದೆ. ಸಹೋದರರು ಎಷ್ಟು ಮಂದಿ ಇದ್ದರೂ ಮದುವೆಯಾಗಬಹುದು. ಆದರೆ ಬೇರೆ ಬೇರೆ ಕುಟುಂಬದವರನ್ನು ಮದುವೆಯಾಗುವಂತಿಲ್ಲ.

ಇದು ನಮ್ಮ ಕುಟುಂಬದ ಸಂಪ್ರದಾಯ ಹಲವಾರು ಶತಮಾನಗಳಿಂದಲೂ ಈ ಸಂಪ್ರದಾಯವನ್ನು ಕುಟುಂಬವು ಪಾಲಿಸಿಕೊಂಡು ಬರುತ್ತಾ ಇದೆ ಮತ್ತು ಕುಟುಂಬದ ಸದಸ್ಯರು ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುತ್ತಾಳೆ ರಾಜೋ. ಈಕೆಯ ಅಮ್ಮನೂ ಮೂವರು ಸಹೋದರರನ್ನು ಮದುವೆಯಾಗಿದ್ದಾರಂತೆ. ತನಗೆ ಮೂವರು ಅಪ್ಪಂದಿರು, ಅಮ್ಮ ಕೂಡ ಮೂವರ ಜತೆ ಚೆನ್ನಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ ಎನ್ನುತ್ತಾಳೆ.

ಹೀಗೆ ಬಹುಮಂದಿಯನ್ನು ಮದುವೆಯಾಗಲು ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ಗಂಡು ಹಾಗೂ ಹೆಣ್ಣಿನ ನಡುವಿನ ಸಂಖ್ಯಾನುಪಾತ. ಈ ಪ್ರದೇಶದಲ್ಲಿ ಹೆಣ್ಣುಮಕ್ಕಳು ಹುಟ್ಟುವುದೇ ಕಮ್ಮಿಯಂತೆ. ಆದ್ದರಿಂದ ಈ ರೀತಿ ಮದುವೆಯಾಗುವುದಕ್ಕೆ ಇಲ್ಲಿ ಒಪ್ಪಿಗೆ ಇದೆ.

ಅಂದಹಾಗೆ ಈಕೆಗೀಗ ಮಕ್ಕಳಿದ್ದು, ಅವರ ತಂದೆ ಯಾರು ಎಂಬ ಬಗ್ಗೆ ತಲೆಕೆಡಿಸಿಕೊಳ್ಳುವ ಗೋಜಿಗೆ ಯಾರೂ ಹೋಗಿಲ್ಲವಂತೆ. ನಮ್ಮದು ಅನ್ಯೋನ್ಯ ಸಂಸಾರ ಎನ್ನುತ್ತಾರೆ ರಾಜೋ ಹಾಗೂ ಆಕೆಯ ಪತಿಯಂದಿರು.

LEAVE A REPLY

Please enter your comment!
Please enter your name here