ಸಪ್ಟೆಂಬರ್.28: ಮನುಷ್ಯರಲ್ಲಿ ಹಣವ ವ್ಯಾಮೋಹ ಹೆಚ್ಚಾಗುತ್ತಿದ್ದು, ಕ್ರೂರತನಕ್ಕೆ ನವದೆಹಲಿಯಲ್ಲಿ ನಡೆದ ಇದೊಂದು ಘಟನೆ ಸಾಕ್ಷಿ ಎನ್ನುವಂತಿದೆ. ಕೇವಲ 20 ರೂಪಾಯಿಗಾಗಿ ವ್ಯಕ್ತಿಯು ಸಾಯುವ ಮಟ್ಟಿಗೆ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.
13 ವರ್ಷದ ಪುಟ್ಟ ಮಗು ತನ್ನ ತಂದೆಯನ್ನು ಬಿಡುವಂತೆ ಪರಿ ಪರಿಯಾಗಿ ಬೇಡಿಕೊಂಡರೂ ಪಾಪಿಗಳ ಮನಸ್ಸು ಕರಗಲಿಲ್ಲ. ಕೋಪದಲ್ಲಿ ನಡೆಸಿದ ಹಲ್ಲೆಯಿಂದಾಗಿ 38 ವರ್ಷದ ರೂಪೇಶ್ ಎಂಬ ವ್ಯಕ್ತಿ ಪ್ರಾಣ ಬಿಟ್ಟಿದ್ದಾರೆ ಎಂದು ನವದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
38 ವರ್ಷದ ಮೃತ ರೂಪೇಶ್, ದೆಹಲಿ ಉತ್ತರ ಭಾಗದ ಬುರಾರಿ ಪ್ರದೇಶದಲ್ಲಿ ವಾಸವಾಗಿದ್ದರು. ಕಳೆದ ಗುರುವಾರ ಮನೆಗೆ ಹತ್ತಿರದಲ್ಲಿದ್ದ ಸಲೂನ್ ಸೆಂಟರ್ ಗೆ ತೆರಳಿದ್ದ ರೂಪೇಶ್, ಶೇವ್ ಮಾಡಿಸಿಕೊಂಡಿದ್ದಾರೆ. ಈ ವೇಳೆ ಸಲೂನ್ ಸೆಂಟರ್ ಮಾಲೀಕ ಸಂತೋಷ್ 50 ರೂಪಾಯಿ ನೀಡುವಂತೆ ಕೇಳಿದ್ದಾರೆ. ಆದರೆ ತಮ್ಮ ಬಳಿಯಿದ್ದ 30 ರೂಪಾಯಿ ನೀಡಿದ್ದ ರೂಪೇಶ್, ಬಾಕಿ ಹಣವನ್ನು ನಂತರದಲ್ಲಿ ನೀಡುವುದಾಗಿ ಮನವಿ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಮತ್ತೊಬ್ಬ ಆರೋಪಿ ಸರೋಜ್ ಹಾಗೂ ಸಂತೋಷ್ ಇಬ್ಬರೂ ಸೇರಿಕೊಂಡು ರೂಪೇಶ್ ಮೇಲೆ ಪೈಪ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು:
ಕಳೆದ ಗುರುವಾರ ರೂಪೇಶ್ ಮೇಲೆ ನಡೆಸಿದ ಹಲ್ಲೆಗೆ ಸಂಬಂಧಿಸಿದ ವಿಡಿಯೋ ಸೆಲೂನ್ ಸೆಂಟರ್ ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋಗಳನ್ನು ಆಧರಿಸಿಕೊಂಡು ಪೊಲೀಸರು ಸೆಲೂನ್ ಸೆಂಟರ್ ಮಾಲೀಕ ಸಂತೋಷ್ ಮತ್ತು ಸರೋಜ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.