ನಾನು ಕರೆ ಮಾಡಿದಾಗಲೆಲ್ಲಾ ನನ್ನಮ್ಮ ಕೇಳುವುದು ಇದೊಂದೇ. ಪ್ರಧಾನಿ ಹೇಳಿದ್ದೇನು?

0

‘ಕರೊನಾದ ಈ ಸಮಯದಲ್ಲಿ ನನ್ನ ಅಮ್ಮನ ಜತೆ ಬಹಳ ಮಾತನಾಡಲು ಸಮಯ ಸಿಗುವುದಿಲ್ಲ. ಆದರೂ ವಾರಕ್ಕೆ ಎರಡು ಬಾರಿಯಾದರೂ ಅಮ್ಮನ ಜತೆ ಮಾತನಾಡುತ್ತೇನೆ. ಆಗೆಲ್ಲಾ ನನ್ನಮ್ಮ ಕೇಳುವುದು ಇದೊಂದು ಪ್ರಶ್ನೆ ನೀನು ಹಲ್ದಿ (ಅರಿಶಿಣ) ಹಾಲು ಸೇವಿಸಿದ್ಯಾ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಫಿಟ್ ಇಂಡಿಯಾ ಚಳವಳಿಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಆನ್‌ಲೈನ್ ಫಿಟ್ ಇಂಡಿಯಾ ಸಂವಾದ ಕಾರ್ಯಕ್ರಮದಲ್ಲಿ ಫಿಟ್​ನೆಸ್​ ದಿಗ್ಗಜರೊಂದಿಗೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತನಾಡಿದರು. ಈ ಸಂದರ್ಭದಲ್ಲಿ ರುಜುತಾ ದಿವೇಕರ್​ ಅವರೊಂದಿಗೆ ಮಾತನಾಡುತ್ತಾ ಈ ವಿಷಯವನ್ನು ಪ್ರಧಾನಿ ಮೋದಿ ಬಹಿರಂಗಪಡಿಸಿದರು.

ನಮ್ಮದೇ ಪ್ರಾಂತ್ಯದ ಆಹಾರಗಳನ್ನು ಹೇಗೆ ಸೇವಿಸಬೇಕು ಎಂಬ ಬಗ್ಗೆ ರುಜುತಾ ಅವರು ಹೇಳುವ ಸಮಯದಲ್ಲಿ ಅರಿಶಿಣದ ಮಹತ್ವವನ್ನು ಹೇಳಿದರು. ನಮ್ಮದೇ ದೇಶದಲ್ಲಿ ಹಲವಾರು ಔಷಧೀಯ ಗುಣಗಳುಳ್ಳ ಪದಾರ್ಥಗಳು ಇರುವಾಗ ನಾವು ಬೇರೆ ಆಹಾರಗಳಿಗೆ ಪ್ರಭಾವಿತರಾಗಿರುವುದು ವಿಷಾದಕರ ಎಂದರು.

ಅರಿಶಿಣವನ್ನು ಹೆಚ್ಚು ಹೆಚ್ಚು ಬಳಸಿ ಎಂದರೆ ನಮ್ಮವರಿಗೆ ಅರ್ಥವಾಗುವುದಿಲ್ಲ. ಆದರೆ ಅದೇ ಬೇರೆ ದೇಶದವರು, ಗೋಲ್ಡನ್​ ಮಿಲ್ಕ್​ ಎಂದೋ ಇಲ್ಲವೇ ಇನ್ನಾವುದೇ ಹೊಸ ಭಾಷೆಯಲ್ಲಿ ಅರಿಶಿಣವನ್ನು ಸೇವಿಸಬೇಕು ಎಂದಾಗ ನಮ್ಮವರಿಗೆ ಎಚ್ಚರವಾಗುತ್ತದೆ ಎಂದು ಹೇಳಿದರು.
ಈ ವಿಷಯವನ್ನು ಹೇಳುವಾಗ ಪ್ರಧಾನಿಯವರು ತಮ್ಮ ತಾಯಿಯ ವಿಷಯವನ್ನು ಪ್ರಸ್ತಾಪ ಮಾಡಿದರು.

ಇದೇ ವೇಳೆ ತಮ್ಮೊಂದು ರೆಸಿಪಿಯ ಗುಟ್ಟು ಬಿಟ್ಟುಕೊಟ್ಟ ಪ್ರಧಾನಿಯವರು, ನಾನು ಮೊದಲಿನಿಂದಲೂ ನುಗ್ಗೆಕಾಯಿಯ ಪರೋಟಾ ಮಾಡಿ ತಿನ್ನುತ್ತಿದ್ದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ ಎಂದ ಮೋದಿ, ನುಗ್ಗೇಕಾಯಿಯನ್ನು ಹ್ಯಾಷ್​ಟ್ಯಾಗ್​ ಮೂಲಕ ಪ್ರಚಾರ ಮಾಡಿದರೆ ಇಂದಿನವರಿಗೆ ಅರ್ಥವಾಗುತ್ತದೆ. ಅದನ್ನೀಗ ನಾನು ಮಾಡಬೇಕಿದೆ ಎಂದು ಚಟಾಕಿ ಹಾರಿಸಿದರು.

ಫಿಟ್​ ಆಗಿರುವುದು ಹೇಗೆ ಎಂಬ ಬಗ್ಗೆ ಜನರಿಗೆ ಟಿಪ್ಸ್​ ನೀಡುವಂತೆ ರುಜುತಾ ಅವರನ್ನು ಪ್ರಧಾನಿ ಕೇಳಿದಾಗ, ರುಜುತಾ ಅವರು, ನಾವು ಎಷ್ಟು ತಿಂದೆವು ಎನ್ನುವುದು ಮುಖ್ಯವಲ್ಲ. ಬದಲಿಗೆ ಹೇಗೆ ತಿಂದೆವು ಎನ್ನುವುದು ಮುಖ್ಯ. ತಿನ್ನುವಷ್ಟೇ ಆಹಾರವನ್ನು ಜಗಿದು ಜಗಿದು ತಿಂದರೆ ಎಲ್ಲಾ ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು. ಇದೇ ವೇಳೆ, ಪ್ಯಾಕೆಟ್​ ಆಹಾರಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.

LEAVE A REPLY

Please enter your comment!
Please enter your name here