ರ್ನಾಟಕದ ಕೆಎಲ್ ರಾಹುಲ್ ಮೊದಲ ಬಾರಿಗೆ ಐಪಿಎಲ್ನಲ್ಲಿ ನಾಯಕತ್ವ ವಹಿಸಿಕೊಳ್ಳಲು ಸಿದ್ಧವಾಗುತ್ತಿದ್ದಾರೆ. ನಾಯಕತ್ವದಲ್ಲಿ ಹೊಸಬರಾದರೂ ದಿಗ್ಗಜರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿರುವ ಅನುಭವ ಹೊಂದಿದ್ದಾರೆ. ಜತೆಗೆ ಟೀಮ್ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಮಾರ್ಗದರ್ಶನ ತಂಡಕ್ಕಿದೆ. ಸಿಎಸ್ಕೆ ನಾಯಕ ಎಂಎಸ್ ಧೋನಿ, ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ, ಮುಂಬೈ ನಾಯಕ ರೋಹಿತ್ ಶರ್ಮರಂಥ ಆಟಗಾರರ ಜತೆಗೆ ಆಡಿರುವ ರಾಹುಲ್ಗೆ ನಾಯಕತ್ವ ಹೊಣೆ ನಿಭಾಯಿಸುವುದು ಕಷ್ಟವಲ್ಲ ಎಂದು ಹೇಳಿಕೊಂಡಿದ್ದಾರೆ. ಅದರಲ್ಲೂ ಕೊಹ್ಲಿ ಹಾಗೂ ಧೋನಿ ಅವರಿಂದ ನಾಯಕತ್ವ ಗುಣ ಕಲಿತುಕೊಂಡಿರುವುದಾಗಿ ಹೇಳಿದ್ದಾರೆ.
ಧೋನಿ ಅವರ ಸಮಾಧಾನಚಿತ್ತ, ಆಟಗಾರರನ್ನು ಬೆಂಬಲಿಸುವುದು, ತಂಡ ಮುನ್ನಡೆಸುವ ವಿರಾಟ್ ಶೈಲಿ, ಆಟಗಾರರು ಉತ್ತಮ ನಿರ್ವಹಣೆ ನೀಡಬೇಕೆಂಬ ಅವರ ಬಯಕೆ ಇಷ್ಟವಾಗುತ್ತದೆ ಜತೆಗೆ ರೋಹಿತ್ ಶರ್ಮ ಯುವಕರಿಗೆ ನೀಡುವ ಪ್ರೋತ್ಸಾಹದಿಂದ ಉತ್ತೇಜನಗೊಂಡಿದ್ದೇನೆ ಎಂದು ಹೇಳುತ್ತಾರೆ ರಾಹುಲ್. ರೋಹಿತ್ ಹಾಗೂ ಧೋನಿಯೇ 7 ಟ್ರೋಫಿ ಹಂಚಿಕೊಂಡಿದ್ದಾರೆ 4 ಬಾರಿ ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್, 3 ಬಾರಿ ಸಿಎಸ್ಕೆ ಈ ಸಾಧನೆ ಮಾಡಿದೆ. ನಾಯಕತ್ವ ಬೆಳವಣಿಗೆಗೆ ಇದೊಂದು ಉತ್ತಮ ವೇದಿಕೆ, ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವ ವಿಶ್ವಾಸವಿದೆ ಎಂದು ಕರ್ನಾಟಕದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಹೇಳಿದ್ದಾರೆ.
ಯುಎಇ ಕಿಂಗ್ಸ್ ಇಲೆವೆನ್ ಪಾಲಿಗೆ ಅದೃಷ್ಠದ ನೆಲದ ಅಂತಾನೇ ಹೇಳಲಾಗುತ್ತಿದೆ. ಇದಕ್ಕೆ ಕಾರಣ 2014ರಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಟೂನಿರ್ ಆರಂಭಿಕ 20 ಪಂದ್ಯಗಳನ್ನು ಯುಎಇಯಲ್ಲಿ ನಡೆಸಲಾಗಿತ್ತು. ಈ ವೇಳೆ ಪಂಜಾಬ್ ತಂಡ ಬಹುತೇಕ ಯಶಸ್ವಿಯೂ ಆಗಿತ್ತು. ಅದೇ ವರ್ಷ ಪಂಜಾಬ್ ತಂಡ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಆದರೆ, ಫೈನಲ್ ಪಂದ್ಯದಲ್ಲಿ ಕೆಕೆಆರ್ ಎದುರು 3 ವಿಕೆಟ್ ಗಳಿಂದ ಸೋಲನುಭವಿಸಿತ್ತು. ಆ ವರ್ಷ ಪಂಜಾಬ್ ಪಾಲಿಗೆ ಇದುವರೆಗೂ ಅತ್ಯಂತ ಯಶಸ್ವಿ ವರ್ಷವೂ ಆಗಿದೆ.