ರೈತರಿಗೆ ನಿಗದಿತ ಬೆಲೆಯಲ್ಲಿ ರಸಗೊಬ್ಬರ ಮಾರಾಟ ಮಾಡಬೇಕು. ಒಂದು ವೇಳೆ ಲೋಪದೋಷ ಕಂಡು ಬಂದಲ್ಲಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಎಚ್ಚರಿಸಿದರು.
ಪಟ್ಟಣದ ಬೀಜ ಗೊಬ್ಬರ ಕೀಟನಾಶಕ ಹಾಗೂ ರಸಗೊಬ್ಬರ ಮಾರಾಟಗಾರರ ಖಾಸಗಿ ಅಂಗಡಿಹಾಗೂ ಸಂಗ್ರಹ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ವಾರಕೊಮ್ಮೆ ಖರೀದಿ ಹಾಗೂ ಮಾರಾಟ ಮಾಡಿದ ದಾಸ್ತಾನು ಇರುವ ವಿವರ ದಾಖಲೆಗಳನ್ನು ಕಡ್ಡಾಯವಾಗಿ ಕೃಷಿ ಇಲಾಖೆಗೆ ನೀಡಬೇಕು. ಅದರ ಆಧಾರದ ಮೇಲೆ ತಾಲೂಕಿನ ರೈತರಿಗೆ ಅಗತ್ಯವಿರುವ ಪ್ರಮಾಣದಲ್ಲಿ ರಸಗೊಬ್ಬರ ದೊರೆಯುವಂತೆ ಇಲಾಖೆ ಕ್ರಮ ಕೈಗೊಳ್ಳಲಿದೆ. ರಸಗೊಬ್ಬರ ಮಾರಾಟ ಮಾಡುವವರು ಕಡ್ಡಾಯವಾಗಿ ರೈತರ ಆಧಾರ್ ಕಾರ್ಡ್, ಬೆರಳಚ್ಚು, ಭೂಮಿ ವಿವರ ಸೇರಿದಂತೆ ರಸಗೊಬ್ಬರ ಪ್ರಮಾಣ ಸೇರಿದಂತೆ ಅಗತ್ಯ ದಾಖಲೆಯನ್ನು ಪಿ.ವಿ.ಎಸ್. ಮಷಿನ್‌ನಲ್ಲಿ ಪಡೆದುಕೊಂಡು ನಂತರವೇ ಮಾರಾಟ ಮಾಡಬೇಕು. ಉತ್ತಮ ಮಳೆ ಹಿನ್ನೆಲೆಯಲ್ಲಿ ಬೇಡಿಕೆ ಇರುವುದರಿಂದ ಮಾರಾಟಗಾರರು ತಾಲೂಕಿನರೈತರಿಗೆ ಸಮರ್ಪಕವಾಗಿ ರಸಗೊಬ್ಬರ ನಿಗದಿತ ದರದಲ್ಲಿ ಮಾರಾಟ ಮಾಡಬೇಕು ಎಂದರು.
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಮಾರಾಟಗಾರರ ಅಂಗಡಿ ಹಾಗೂ ಗೋದಾಮುಗಳಿಗೆ ಭೇಟಿ ನೀಡಿ ಪರೀಶಿಲಿಸಿದರು. ಜಿಲ್ಲಾ ಉಪ ಕೃಷಿ ನಿರ್ದೇಶಕ ಚಂದ್ರಶೇಖರ್, ಕೃಷಿ ಅಧಿಕಾರಿ ದೇವರಾಜ್, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಇದ್ದರು