ಸಾಮಾನ್ಯ ಕೆಮ್ಮು ನೆಗಡಿ, ಜ್ವರ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಕುಳಿತು ವೈದರಿಂದ ಚಿಕಿತ್ಸೆ ಪಡೆಯಲು ಇ-ಸಂಜಿವಿನಿ ಆಯಪ್ ಬಳಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಮೋಹನ್ ಅವರು ತಿಳಿಸಿದ್ದಾರೆ.
ವೈದ್ಯರನ್ನು ಮೊಬೈಲ್‍ನಲ್ಲಿ ಸಂಪರ್ಕಿಸಲು ಮೊಬೈಲ್‍ನ ಪ್ಲೇ ಸ್ಟೋರ್‍ನಲ್ಲಿ ಇ-ಸಂಜೀವಿನಿ ಒಪಿಡಿ ಆಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಅಥವಾ ಗೂಗಲ್‍ನಲ್ಲಿ ಇ-ಸಂಜೀವಿನಿ ಒಪಿಡಿ ಎಂದು ನಮೂದಿಸಿ, ನೋಂದಣಿ ಮಾಡಿಕೊಳ್ಳಬೇಕು. ವೆಬ್ ವಿಡಿಯೋ ಮೂಲಕ ಸಂಪರ್ಕಕ್ಕೆ ಬರುವ ವೈದ್ಯರಿಗೆ ಕಾಡುತ್ತಿರುವ ಸಮಸ್ಯೆ ಕುರಿತು ವಿವರಿಸಿದರೆ ವೈದ್ಯರು ಸಮಸ್ಯೆಗೆ ತಕ್ಕಂತೆ ಚಿಕಿತ್ಸೆ ಬರೆದುಕೊಡಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು ಸಲಹೆ ನೀಡಿದ್ದಾರೆ.
ಏನಿದು ಇ-ಸಂಜೀವಿನಿ:-ಕೊರೋನ ತಡೆಗಟ್ಟುವ ಸಲುವಾಗಿ ಸರ್ಕಾರ ಸಾರ್ವಜನಿಕರಿಗೆ ಮನೆಯಲ್ಲಿಯೇ ಇದ್ದು ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಳ್ಳಲಾಗುತ್ತಿದೆ, ಇಂತಹ ಸಂದರ್ಭದಲ್ಲಿ ಆರೋಗ್ಯದ ತೊಂದರೆಗಳಿಗೆ ಮನೆಯಲ್ಲಿ ಕುಳಿತು ಚಿಕಿತ್ಸೆ ಪಡೆಯಲು ಕೇಂದ್ರ ಆರೋಗ್ಯ ಸಚಿವಾಲಯ ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ (ನ್ಯಾಷನಲ್ ಟೆಲಿ ಕನ್ಸ್‍ಲ್ಟೇಷನ್ ಸರ್ವಿಸ್) ಎಂಬ ಹೆಸರಿನಲ್ಲಿ ಆಯಪ್ ಲಿಂಕ್ ಸಿದ್ದಪಡಿಸಿದೆ.
ಟೆಲಿ ಸಮಾಲೋಚನಾ ಸೇವೆಗಾಗಿ ಮೊಬೈಲ್‍ನ ಪ್ಲೇಸ್ಟೋರ್ ಅಥವಾ ಗೂಗಲ್‍ನಲ್ಲಿ ಇ- ಸಂಜೀವಿನಿ ಒಪಿಡಿ ಎಂದು ನಮೂದಿಸಿದರೆ ಕೇಂದ್ರ ಆರೋಗ್ಯ ಸಚಿವಾಲಯದ ಮುಖಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ರೋಗಿಯ ರಿಜಿಸ್ಟ್ರೇಷನ್‍ನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿದರೆ ಒಟಿಪಿ ಸಂಖ್ಯೆ ಬರಲಿದೆ. ಈ ಒಟಿಪಿ ನಮೂದಿಸಿದರೆ, ರಿಜಿಸ್ಟ್ರೇಷನ್ ಅಪ್ಲಿಕೇಷನ್ ತೆರೆದುಕೊಳ್ಳುತ್ತದೆ. ಅದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು, ಮೊಬೈಲ್ ಸಂಖ್ಯೆ ಹಾಗೂ ವಿಳಾಸ ನಮೂದಿಸಿ ಲಾಗಿನ್ ಆಗಬೇಕು. ಈ ವೇಳೆ ಟೋಕನ್ ನಂಬರ್ ದೊರೆಯಲಿದೆ. ಟೋಕನ್ ನಂಬರ್ ನೀಡಿ, ವೈದ್ಯರನ್ನು ವಿಡಿಯೋಕಾಲ್ ಮೂಲಕ ಸಂಪರ್ಕಿಸಬಹುದು.
ಈ ಸೇವೆ ನಿತ್ಯ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಲಭ್ಯವಿರುತ್ತದೆ. ಒಮ್ಮೆ ನೋಂದಣಿ ಆದವರು ಮತ್ತೊಮ್ಮೆ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ಕೊಡಗು ಜಿಲ್ಲೆಯಲ್ಲಿ ವೈದ್ಯಕೀಯ ಆಸ್ಪತ್ರೆ ಹಾಗೂ ಸಾರ್ವಜನಿಕ ಆಸ್ಪತ್ರೆ ವಿರಾಜಪೇಟೆ, ಸಾರ್ವಜನಿಕ ಆಸ್ಪತ್ರೆ ಸೋಮವಾರಪೇಟೆ ವೈದ್ಯಾಧಿಕಾರಿಗಳನ್ನು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಮೋಹನ್ ಅವರು ತಿಳಿಸಿದ್ದಾರೆ.