ನ್ಯಾಯಾಲಯ ಶುಲ್ಕ ಭರಿಸಲು ಒಡವೆ ಮಾರಿದೆ- ಲಂಡನ್ ಕೋರ್ಟ್‍ಗೆ ಅನಿಲ್ ಅಂಬಾನಿ ಹೇಳಿಕೆ

0

ನಾನು ಐಶಾರಾಮಿ ಜೀವನ ನಡೆಸುತ್ತಿಲ್ಲ
ನನ್ನ ಖರ್ಚನ್ನು ಪತ್ನಿ, ಮಗ, ಕುಟುಂಬಸ್ಥರು ನೋಡಿಕೊಳ್ತಿದ್ದಾರೆ

ಲಂಡನ್: ನ್ಯಾಯಾಲಯದ ಶುಲ್ಕ ಭರಿಸಲು ನನ್ನ ಬಳಿ ಇದ್ದ ಎಲ್ಲ ಆಭರಣಗಳನ್ನು ಮಾರಿದ್ದೇನೆ. ನನ್ನ ಖರ್ಚು ವೆಚ್ಚಗಳನ್ನು ಕುಟುಂಬಸ್ಥರು ನೋಡಿಕೊಳ್ಳುತ್ತಿದ್ದಾರೆ ಎಂದು ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಹೇಳಿದ್ದಾರೆ.

ಲಂಡನ್ ಹೈಕೋರ್ಟ್‍ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಂಬಾನಿ ಹೇಳಿದ್ದಾರೆ. ಚೀನಾ ಮೂಲದ ಮೂರು ಬ್ಯಾಂಕ್‍ಗಳು ಲಂಡನ್‍ನಲ್ಲಿ ಅನಿಲ್ ಅಂಬಾನಿ ವಿರುದ್ಧ ಮೊಕದ್ದಮೆ ಹೂಡಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ಹೈ ಕೋರ್ಟ್ ವಿಚಾರಣೆ ನಡೆಸಿತು. ಈ ಹಿನ್ನೆಲೆ ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಸಹೋದರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು.

ಖರ್ಚು, ವೆಚ್ಚಗಳನ್ನು ನನ್ನ ಪತ್ನಿ ಹಾಗೂ ಕುಟುಂಬಸ್ಥರು ನೋಡಿಕೊಳ್ಳುತ್ತಿದ್ದಾರೆ. ತಾಯಿ ಹಾಗೂ ಮಗನಿಂದ ಸಾಲ ಪಡೆದಿದ್ದೇನೆ. ದುಬಾರಿ ಬೆಲೆಯ ಕಾರಿನಲ್ಲಿ ಓಡಾಡಿದ್ದೇನೆ ಎಂಬ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಜನವರಿ ಹಾಗೂ ಜೂನ್ 2020ರಲ್ಲಿ ಆಭರಣ ಮಾರಿದ ಬಳಿಕ 9.9 ಕೋಟಿ ಸಿಕ್ಕಿದೆ. ಅಲ್ಲದೆ ಮೂರು ಗಂಟೆಗಳಿಗೂ ಹೆಚ್ಚು ಕಾಲ ಕೋರ್ಟ್ ವಿಚಾರಣೆ ನಡೆಸಿದ್ದು, ಖಾಸಗಿಯಾಗಿ ವಿಚಾರಣೆ ನಡೆಸುವ ಮನವಿಯನ್ನು ತಿರಸ್ಕರಿಸಲಾಗಿದೆ.

ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ ಲಿ.ನ ಮುಂಬೈ ಶಾಖೆ, ಚೀನಾ ಡೆವಲಪ್‍ಮೆಂಟ್ ಬ್ಯಾಂಕ್ ಹಾಗೂ ಎಕ್ಸಿಮ್ ಬ್ಯಾಂಕ್ ಆಫ್ ಚೀನಾ ದಾಖಲಿಸಿರುವ ಸಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 22ರಂದು ವಿಚಾರಣೆ ನಡೆಸಿದ್ದ ಕೋರ್ಟ್, ಜೂನ್ 12ರೊಳಗೆ 5,821 ಕೋಟಿ ರೂ. ಪಾವತಿಸುವಂತೆ ಹಾಗೂ ಹೆಚ್ಚುವರಿಯಾಗಿ ನ್ಯಾಯಾಲಯದ ಶುಲ್ಕ 7 ಸಾವಿರ ಕೋಟಿ ರೂ.ಗಳನ್ನು ಪಾವತಿಸುವಂತೆ ಆದೇಶಿಸಿತ್ತು.

ಬಾಕಿ ಹಣ ಪಾವತಿಸುವಲ್ಲಿ ವಿಫಲವಾದ ಕಾರಣ ಅಂಬಾನಿಯವರ ಆಸ್ತಿಯನ್ನು ಬಹಿರಂಗಪಡಿಸುವಂತೆ ಚೀನಿ ಬ್ಯಾಂಕ್‍ಗಳು ಕೋರ್ಟ್‍ಗೆ ಮನವಿ ಮಾಡಿವೆ. ಈ ಹಿನ್ನೆಲೆ ಜೂನ್ 29ರಂದು ಲಂಡನ್ ನ್ಯಾಯಾಲಯ ವಿಶ್ವಾದ್ಯಂತ ತಾನು ಹೊಂದಿರುವ ಆಸ್ತಿ ಕುರಿತು 74 ಲಕ್ಷ ರೂ.ಗಳ ಅಫಿಡೆವಿಟ್ ಸಲ್ಲಿಸುವಂತೆ ತಿಳಿಸಿತ್ತು. ಆದರೆ ಇದಕ್ಕೆ ಉತ್ತರಿಸಿರುವ ಅಂಬಾನಿ, ನಾನು ಐಶಾರಾಮಿ ಜೀವನ ನಡೆಸುತ್ತಿಲ್ಲ. ಇದನ್ನು ಸಹ ನನ್ನ ಪತ್ನಿ ಹಾಗೂ ಕುಟುಂಬಸ್ಥರು ಭರಿಸುತ್ತಿದ್ದಾರೆ. ನನ್ನ ಚಿನ್ನಾಭರಣಗಳನ್ನು ಮಾರಿ ನಾನು ಕಾನೂನು ಶುಲ್ಕ ಭರಿಸುತ್ತಿದ್ದೇನೆ ಎಂದು ಅಂಬಾನಿ ಕೋರ್ಟ್‍ಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here