ಪಂಜಾಬ್‌: ಸ್ಮಾರ್ಟ್ ರೇಷನ್ ಕಾರ್ಡ್ ಯೋಜನೆಗೆ ಚಾಲನೆ ನೀಡಿದ ಅಮರೀಂದರ್ ಸಿಂಗ್

0

ರಾಜ್ಯದಾದ್ಯಂತ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (ಎನ್‌ಎಫ್‌ಎಸ್‌ಎ) ವ್ಯಾಪ್ತಿಗೆ ಬರುವ 1.41 ಕೋಟಿ ಫಲಾನುಭವಿಗಳಿಗೆ ಸ್ಮಾರ್ಟ್‌ ರೇಷನ್ ಕಾರ್ಡ್‌ (ಪಡಿತರ ಚೀಟಿ) ಯೋಜನೆ ಹಾಗೂ ಎನ್‌ಎಫ್‌ಎಸ್‌ಎ ವ್ಯಾಪ್ತಿಗೆ ಒಳಪಡದ ಸುಮಾರು 9 ಲಕ್ಷ ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ಪಡಿತರ ಒಗಿಸುವ ಪ್ರತ್ಯೇಕ ಅನುದಾನಿತ ಯೋಜನೆಗೆ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್ ಚಾಲನೆ ನೀಡಿದರು.

ಈ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಪ್ರಕಟಣೆಯಲ್ಲಿ, ಸ್ಮಾರ್ಟ್‌ ಪಡಿತರ ಚೀಟಿ ಯೋಜನೆಯ ಅಡಿಯಲ್ಲಿ ಈ ತಿಂಗಳು ಒಟ್ಟು 37.5 ಲಕ್ಷ ಅರ್ಹ ಫಲಾನುಭವಿಗಳಿಗೆ ಸ್ಮಾರ್ಟ್‌ ಕಾರ್ಡುಗಳನ್ನು ವಿತರಿಸಲಾಗುವುದು. ಇದರೊಂದಿಗೆ ರಾಜ್ಯದ ಫಲಾನುಭವಿಗಳ ಸಂಖ್ಯೆ 1.50 ಕೋಟಿಗೆ ಏರಿಕೆಯಾಗಲಿದೆ ಎಂದು ಮುಖ್ಯಮಂತ್ರಿಗಳು ಹೇಳಿರುವುದಾಗಿ ತಿಳಿಸಲಾಗಿದೆ.

‘1.41 ಕೋಟಿ ಫಲಾನುಭವಿಗಳು ಕೇಂದ್ರದ ಎನ್‌ಎಫ್‌ಎಸ್‌ಎ ವ್ಯಾಪ್ತಿಗೆ ಬರಲಿದ್ದಾರೆ. ಪದೇಪದೆ ಮನವಿ ಮಾಡಿದ ಹೊರತಾಗಿಯೂ ಸುಮಾರು 9 ಲಕ್ಷ ಜನರು ಕೇಂದ್ರದ ಎನ್‌ಎಫ್‌ಎಸ್‌ಎ ವ್ಯಾಪ್ತಿಗೆ ಒಳಪಟ್ಟಿಲ್ಲ. ಹಾಗಾಗಿ ಪಂಜಾಬ್‌ ಸರ್ಕಾರವು ಅಂತಹ ಎಲ್ಲ ಅರ್ಹ ವ್ಯಕ್ತಿಗಳನ್ನು ಒಳಗೊಳ್ಳುವ ರಾಜ್ಯ ಅನುದಾನಿತ ಪಡಿತರ ಯೋಜನೆಯನ್ನು ಆರಂಭಿಸಲು ನಿರ್ಧರಿಸಿತು. ಅದರ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು’ ಎಂದೂ ಮಾಹಿತಿ ನೀಡಲಾಗಿದೆ.

LEAVE A REPLY

Please enter your comment!
Please enter your name here