ಪಾಕಿಸ್ತಾನದಿಂದ ಉಗ್ರರಿಗೆ ಡ್ರೋನ್ ಮೂಲಕ ಶಸ್ತ್ರಾಸ್ತ್ರ ರವಾನೆ; ರಜೌರಿಯಲ್ಲಿ 3 ಎಲ್‌ಇಟಿ ಉಗ್ರರ ಬಂಧನ

0

ಪಾಕಿಸ್ತಾನದಿಂದ ಉಗ್ರರಿಗೆ ಡ್ರೋನ್ ಮೂಲಕ ಶಸ್ತ್ರಾಸ್ತ್ರ ರವಾನೆ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭರ್ಜರಿ ಕಾರ್ಯಾಚರಣೆ ನಡೆಸಿದ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ರಜೌರಿಯಲ್ಲಿ ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಬಂಧಿಸಿದ್ದಾರೆ.

ಭಾರತದಲ್ಲಿರುವ ಪಾಕ್ ಮೂಲದ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಕೊರತೆಯನ್ನು ನೀಗಿಸಲು ಹಾಗೂ ಉಗ್ರರಿಗೆ ಅಗತ್ಯ ವಸ್ತುಗಳು ಸಮರ್ಪಕವಾಗಿ ಪೂರೈಕೆ ಮಾಡಲು ಡ್ರೋನ್ ಬಳಕೆ ಮಾಡುತ್ತಿದ್ದ ಮೂವರು ಲಷ್ಕರ್ ಉಗ್ರರನ್ನು ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಮೂಲಗಳ ಪ್ರಕಾರ ಬಂಧಿತ ಮೂವರು ಉಗ್ರರು ದಕ್ಷಿಣ ಕಾಶ್ಮಿರದ ಪುಲ್ವಾಮಾ ಹಾಗೂ ಶೋಪಿಯಾನ್‍ನಿಂದ ರಾಜೌರಿಗೆ ಬಂದು ಡ್ರೋನ್‍ಗಳ ಮೂಲಕ ಬಿಡಲಾಗಿದ್ದ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುತ್ತಿದ್ದರು. ಶುಕ್ರವಾರ ರಾತ್ರಿ ಡ್ರೋನ್‍ಗಳು ಎರಡು ಎಕೆ-56 ಬಂದೂಕು, 180 ಸುತ್ತಿನ ಆರು ಎಕೆ ಮ್ಯಾಗಜಿನ್, 3 ಬಂದೂಕು ಮ್ಯಾಗಜಿನ್, 30 ಸುತ್ತಿನ 2 ಚೀನಿ ಬಂದೂಕುಗಳು, ನಾಲ್ಕು ಗ್ರೆನೇಡ್ ಹಾಗೂ ಎರಡು ಪೌಚ್‍ಗಳನ್ನು ಕೆಳಗೆ ಬಿಟ್ಟಿದ್ದವು. ಇವುಗಳನ್ನು ಕೊಂಡೊಯ್ಯಲು ಉಗ್ರರು ಆಗಮಿಸಿದ ವೇಳೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತ ಉಗ್ರರನ್ನು ಪುಲ್ವಾಮಾದ ರಾಹಿಲ್ ಬಶೀರ್ ಹಾಗೂ ಅಮಿರ್ ಜಾನ್ ಅಲಿಯಾಸ್ ಹಮ್ಜಾ ಎಂದು ಗುರುತಿಸಲಾಗಿದೆ. ಹಫೀಜ್ ಯೂನುಸ್ ವಾನಿಯನ್ನು ಶೋಪಿಯಾನ್ ಮೂಲದವನು ಎನ್ನಲಾಗಿದೆ. ಅಂತೆಯೇ ಮೂವರು ಉಗ್ರರಿಂದ ಒಂದು ಲಕ್ಷ ರೂ. ನಗದನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಇನ್ನು ಗಡಿಗಳನ್ನು ನಿರ್ವಹಿಸುವ ಬಿಎಸ್‍ಎಫ್ ಯೋಧರು ತೀವ್ರ ಕಟ್ಟೆಚ್ಚರ ವಹಿಸಿದ್ದು, ಡ್ರೋನ್‍ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಬಿಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲರ್ಟ್ ಆಗಿದ್ದಾರೆ. ಈ ಹಿಂದೆ ಒಂದು ಡ್ರೋನ್‍ನ್ನು ಕತುವಾ ಬಳಿ ಬಿಎಸ್‍ಎಫ್ ಯೋಧರು ಇತ್ತೀಚೆಗೆ ಹೊಡೆದುರುಳಿಸಿದ್ದಾರೆ. ಅಲ್ಲದೆ ಜವಾಹರ್ ಸುರಂಗದ ಬಳಿ ಮೂರು ಡ್ರೋನ್ ಹಾರಾಟವನ್ನು ತಡೆಹಿಡಿಯಲಾಗಿತ್ತು ಎಂದು ಸೇನೆಯ ಉನ್ನತಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here