ಪಾಕಿಸ್ತಾನ ಕಡೆಯಿಂದ ಒಳನುಸುಳುವಿಕೆ ತಡೆಗೆ ಗಡಿಯಲ್ಲಿ ಹೆಚ್ಚುವರಿ ಯೋಧರ ನಿಯೋಜನೆ

0

ಭಾರತದ ಗಡಿಯೊಳಗೆ ಉಗ್ರರು ನುಸುಳಲು ಪಾಕಿಸ್ತಾನ ಸೇನೆಯು ಬೆಂಬಲಿಸುತ್ತಿರುವ ಹಿನ್ನೆಲೆಯಲ್ಲಿ ಗಡಿ ನಿಯಂತ್ರಣ ರೇಖೆಯಾದ್ಯಂತ (ಎಲ್‌ಒಸಿ) ಹೆಚ್ಚುವರಿ 3,000 ಯೋಧರನ್ನು ನಿಯೋಜಿಸಲಾಗಿದೆ.

‘ಒಳನುಸುಳುವಿಕೆ ತಡೆಯಲು ಎಲ್‌ಒಸಿಯಲ್ಲಿ ಹೆಚ್ಚುವರಿ ಯೋಧರನ್ನು ನಿಯೋಜಿಸಲಾಗಿದೆ. ಇದರಿಂದ ಪ್ರಯೋಜನವಾಗಿದೆ’ ಎಂದು ಉನ್ನತ ಮೂಲಗಳು ತಿಳಿಸಿವೆ.

ಒಳನುಸುಳುವಿಕೆಯ ದೊಡ್ಡ ಸಂಚುಗಳನ್ನು ವಿಫಲಗೊಳಿಸುವಲ್ಲಿ ಹೆಚ್ಚುವರಿಯಾಗಿ ನಿಯೋಜನೆಗೊಂಡಿರುವ ಯೋಧರು ಯಶಸ್ವಿಯಾಗಿದ್ದಾರೆ. ಅಕ್ಟೋಬರ್-ನವೆಂಬರ್ ಒಳಗೆ ಹೆಚ್ಚು ಉಗ್ರರನ್ನು ಭಾರತದ ಗಡಿಯೊಳಕ್ಕೆ ನುಸುಳಿಸುವ ಪಾಕಿಸ್ತಾನ ಸೇನೆಯ ಸಂಚು ವಿಫಲವಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಲು ಸತತವಾಗಿ ಯತ್ನಿಸುತ್ತಿದೆ. ಈ ಮಧ್ಯೆ, ಸೇನಾ ಮುಖ್ಯಸ್ಥರು ಶ್ರೀನಗರಕ್ಕೆ ಭೇಟಿ ನೀಡಿ ಭದ್ರತಾ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಎಲ್‌ಒಸಿಯಲ್ಲಿನ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿ ಕಾರ್ಯಾಚರಣೆ ಸಿದ್ಧತೆ ಬಗ್ಗೆ ಪರಾಮರ್ಶೆ ನಡೆಸಿದ್ದಾರೆ ಎಂದೂ ಮೂಲಗಳು ಹೇಳಿವೆ.

ಪೂರ್ವ ಲಡಾಖ್‌ನಲ್ಲಿ ಚೀನಾ ಪಡೆಗಳೊಂದಿಗೆ ಸಂಘರ್ಷ ಸಂಭವಿಸಿ ಉದ್ವಿಗ್ನ ಸ್ಥಿತಿ ಇರುವ ಸಂದರ್ಭದಲ್ಲೇ ಪಾಕ್ ಪಡೆಗಳು ಕದನ ವಿರಾಮ ಉಲ್ಲಂಘನೆ ಹೆಚ್ಚಿಸಿವೆ.

LEAVE A REPLY

Please enter your comment!
Please enter your name here