ಲಕ್ನೋ, ಸೆ. 6: ಇಲ್ಲಿನ 22 ವರ್ಷದ ಯುವಕನ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಠಾಣಾಧಿಕಾರಿ (ಎಸ್‌ಎಚ್‌ಒ) ಸಹಿತ 6 ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಹಾಗೂ ಮೂವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯ ಗಿಲೌಲಾ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ರನ್ನು ಬಂಧಿಸಲಾಗಿದೆ ಎಂದು ಶ್ರಾವಸ್ಠಿಯ ಪೊಲೀಸ್ ಅಧೀಕ್ಷಕ ಅನೂಪ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಬಾಲಕಿಯೋರ್ವಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ವಾಜಿದ್ ಅಲಿ (22) ಎಂಬಾತನ ವಿರುದ್ಧ ಕಳೆದ ತಿಂಗಳು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆಗಾಗಿ ಅಲಿಯನ್ನು ಶುಕ್ರವಾರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಅನಂತರ ಅಲಿ ಗಿಲೌಲಾ ಪೊಲೀಸ್ ಠಾಣೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ತನ್ನ ಪುತ್ರನನ್ನು ಎರಡರಿಂದ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಕಾನೂನು ಬಾಹಿರವಾಗಿ ಇರಿಸಲಾಗಿತ್ತು. ಅಲ್ಲದೆ ಆತನ ಬಿಡುಗಡೆಗೆ ಪೊಲೀಸರು ಲಂಚದ ಬೇಡಿಕೆ ಇರಿಸಿದ್ದರು ಎಂದು ಅಲಿಯ ತಂದೆ ಆರೋಪಿಸಿರುವುದಾಗಿ ಸಿಂಗ್ ತಿಳಿಸಿದ್ದಾರೆ.
ಪೊಲೀಸ್ ಠಾಣೆ ಅಧಿಕಾರಿ (ಎಸ್‌ಎಚ್‌ಒ) ವಿನೋದ್ ಕುಮಾರ್, ಮೂವರು ಸಬ್ ಇನ್ಸ್‌ಪೆಕ್ಟರ್‌ಗಳು ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅಲಿಯ ತಂದೆ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಎಸ್‌ಎಚ್‌ಒ ಹಾಗೂ ಇತರ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಕೊಲೆ ಹಾಗೂ ಕಾನೂನುಬಾಹಿರ ಕಸ್ಟಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. ಉಪ ಅಧೀಕ್ಷಕರ ಶ್ರೇಣಿಯ ಅಧಿಕಾರಿ ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ. ಈ ವಿಷಯದ ಕುರಿತು ನ್ಯಾಯಾಂಗ ತನಿಖೆಗೆ ಜಿಲ್ಲಾ ದಂಡಾಧಿಕಾರಿ ಆದೇಶಿಸಿದ್ದಾರೆ ಎಂದು ಅನೂಪ್ ಕುಮಾರ್ ಸಿಂಗ್ ತಿಳಿಸಿದ್ದಾರೆ.