ಪ್ರಧಾನಿ, ರಾಷ್ಟ್ರಪತಿ ಪ್ರವಾಸಕ್ಕೆ ವಿಶೇಷ ವಿಮಾನ: ಇದರಲ್ಲಿದೆ ಕ್ಷಿಪಣಿ ನಿರೋಧಕ ವ್ಯವಸ್ಥೆ !

0

ದೇಶದ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಿಗಳ ಪ್ರವಾಸಕ್ಕಾಗಿ ವಿಶೇಷವಾಗಿ ತಯಾರಿಸಲ್ಪಟ್ಟ ಏರ್‌ ಇಂಡಿಯಾ ಒನ್‌ ವಿಮಾನ ಭಾರತ ತಲುಪಿದೆ. ಅಮೆರಿಕದಿಂದ ದೆಹಲಿಯ ಏರ್‌ ಪೋರ್ಟ್ ಗೆ ಏರ್‌ ಇಂಡಿಯಾ ಒನ್‌ ಬಂದಿಳಿದಿದ್ದು, ಗಣ್ಯರ ಸಂಚಾರಕ್ಕೆ ಹಾಗೂ ಭದ್ರತೆ ಅನೂಕೂಲವಾಗುವಂತೆ ಈ ವಿಮಾನವನ್ನು ರೂಪಿಸಲಾಗಿದೆ.

2018ರಲ್ಲಿ ಯೋಜನೆಗೆ ಅಂಕಿತ:

ಗಣ್ಯರ ಸಂಚಾರಕ್ಕೆ ಹಲವು ಭದ್ರತಾ ಅಂಶಗಳನ್ನು ಹೊಂದಿದ ಎರಡು ವಿಮಾನಗಳನ್ನು ಮೀಸಲಿಡಲು ಸರಕಾರ ನಿರ್ಧರಿಸಿತ್ತು. ಅದರ ಭಾಗವಾಗಿ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾದಲ್ಲಿ ಪ್ರಯಾಣಿಕ ಸೇವೆಯಲ್ಲಿ ನಿರತವಾಗಿದ್ದ ಎರಡು ವಿಮಾನಗಳನ್ನು ಅಮೆರಿಕದ ಬೋಯಿಂಗ್‌ ಕಂಪನಿಗೆ 2018ರಲ್ಲಿ ಕಳುಹಿಸಿ, ಮಾರ್ಪಾಡು ಮಾಡಲು ಸೂಚಿಸಲಾಗಿತ್ತು. ಈ ವಿಮಾನಗಳು ಜುಲೈನಲ್ಲೇ ಭಾರತಕ್ಕೆ ಸಿಗಬೇಕಾಗಿದ್ದವು. ಆದರೆ ಕೋವಿಡ್ ಕಾರಣ ಜುಲೈನಲ್ಲಿ, ತಾಂತ್ರಿಕ ಕಾರಣದಿಂದ ಆಗಸ್ಟ್‌ನಲ್ಲಿ ಹಸ್ತಾಂತರ ಮುಂದಕ್ಕೆ ಹೋಗಿತ್ತು.

ಏರ್‌ ಫೋರ್ಸ್‌ ಒನ್‌ ಮಾದರಿಯ ಭದ್ರತಾ ಸೌಕರ್ಯ

ಅಮೆರಿಕ ಅಧ್ಯಕ್ಷರು ಬಳಸುವ ಏರ್‌ಫೋರ್ಸ್‌ ಒನ್‌ ರೀತಿಯ ಮಾದರಿಯಲ್ಲಿಯೇ ಏರ್‌ ಇಂಡಿಯಾ ಒನ್‌ ಕೂಡ ಭದ್ರತಾ ಸೌಕರ್ಯ ಹೊಂದಿದ್ದು, ಕ್ಷಿಪಣಿ ದಾಳಿ ನಡೆದರೂ ಜಗ್ಗದ ಈ ವಿಮಾನದ ಮರು ವಿನ್ಯಾಸ, ವಿಮಾನ ಖರೀದಿ, ವಿವಿಐಪಿಗಳ ಓಡಾಟಕ್ಕೆ ತಕ್ಕಂತೆ ಬದಲಾವಣೆ ಮಾಡಲು 8400 ಕೋಟಿ ರು. ಖರ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ

ಬೋಯಿಂಗ್ 777 ಎಂಬ ಹೆಸರಿನ ಈ ವಿಮಾನಗಳು ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಂದಿದ್ದು, ಲಾರ್ಜ್‌ ಏರ್‌ಕ್ರಾಫ್ಟ್, ಇನ್ ಫ್ರೆರಾರ್ಡ್ ಕೌಂಟರ್ ಮೆಸರ್ಸ್ (ಎಲ್‌ಎಐಆರ್‌ಸಿಎಂ) ಹಾಗೂ ಸೆಲ್ಫ್ ಪೊಟೆಕ್ಷನ್‌ ಸೂಟ್ಸ್‌’ (ಎಸ್‌ಪಿಎಸ್‌) ಸಿಸ್ಟಂಗಳು ಈ ವಿಮಾನದಲ್ಲಿದೆ. ಸಮಾಜ ವಿದ್ರೋಹಿ ಶಕ್ತಿಗಳು ಹೆಗಲ ಮೇಲಿಟ್ಟು ನಡೆಸುವ ಕ್ಷಿಪಣಿ ದಾಳಿಯಿಂದ ರಕ್ಷಣೆ ಒದಗಿಸುವಲ್ಲಿಯೂ ಇದು ಸಹಕಾರಿಯಾಗಲಿದ್ದು, ಈ ಸಾಧನಗಳನ್ನು 1400 ಕೋಟಿ ರು. ವೆಚ್ಚದಲ್ಲಿ ಭಾರತಕ್ಕೆ ಒದಗಿಸಲು ಫೆಬ್ರವರಿಯಲ್ಲಿ ಅಮೆರಿಕ ನಿರ್ಧಾರ ಕೈಗೊಂಡಿತ್ತು.

ನಿರಂತರವಾಗಿ 17 ಗಂಟೆ ಕಾಲ ಹಾರುತ್ತದೆ

ಈ ವಿಮಾನ ಅಲ್ಟ್ರಾ ಸೂಪರ್‌ ಆಗಿದ್ದು, ವಿವಿಐಪಿಗಳಿಗೆ ದೊಡ್ಡ ಕ್ಯಾಬಿನ್‌, ಕಿರಿದಾದ ತುರ್ತು ಚಿಕಿತ್ಸಾ ಘಟಕ ಸೇರಿದಂತೆ ನಿರಂತರವಾಗಿ 17 ಗಂಟೆ ಕಾಲ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಬಹುತೇಕ ಬ್ಯುಸಿನೆಸ್‌ ಕ್ಲಾಸ್‌ ಸೀಟ್‌ ಅಳವಡಿಕೆ ಮಾಡಲಾಗಿರುವ ಈ ವಿಮಾನವನ್ನು ವಾಯುಸೇನೆ ಪೈಲಟ್‌ಗಳಿಂದ ಮಾತ್ರ ಚಾಲನೆ ಮಾಡಲಾಗುತ್ತದೆ. ಈ ವಿಮಾನ ಅತ್ಯಾಧುನಿಕ ಸಂವಹನ ವ್ಯವಸ್ಥೆಯನ್ನು ಹೊಂದಿದ್ದು, ಹ್ಯಾಕ್‌ ಮಾಡಲಾಗದ ಆಡಿಯೋ ಮತ್ತು ವಿಡಿಯೋ ಸಂವಹನವನ್ನೂ ಕೂಡ ನಡೆಸಬಹುದು.

ಸದ್ಯ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಪ್ರಧಾನಿ ಪ್ರವಾಸಕ್ಕೆ ಈ ಬೋಯಿಂಗ್‌-747 ವಿಮಾನವನ್ನು ಬಳಸಲಾಗುತ್ತಿದ್ದು, ಮತ್ತೊಂದು ಬೋಯಿಂಗ್‌-777 ಏರ್‌ ಇಂಡಿಯಾ ಒನ್‌ ವಿಮಾನ ಮುಂದಿನ ದಿನಗಳಲ್ಲಿ ಭಾರತಕ್ಕೆ ಹಸ್ತಾಂತರ ಆಗಲಿದೆ.

LEAVE A REPLY

Please enter your comment!
Please enter your name here