ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯ ಸರ್ಕಾರದ ವಿರುದ್ಧ ಟೆಲಿಫೋನ್ ಕದ್ದಾಲಿಕೆಯ ಗುರುತರ ಆರೋಪ ಮಾಡಿದ್ದಾರೆ. ಈ ಕುರಿತು ಈಗಾಗಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಪತ್ರ ಬರೆದಿದ್ದಾರೆ. ಆದ್ರೆ ಈ ಆರೋಪದ ಕುರಿತು ತನಿಖೆ ಮಾಡುವ ಬಗ್ಗೆ ಪೊಲೀಸ್ ಕಮಿಷನರ್ ಹಾಗೂ ಗೃಹ ಇಲಾಖೆ ಯಾವುದೇ ಉತ್ತರ ನೀಡಿಲ್ಲ. ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಡಿ.ಕೆ. ಶಿವಕುಮಾರ್ ತಮ್ಮ ಮುಂದಿನ ನಡೆ ಬಗ್ಗೆ ನಿರ್ಧರಿಸಿದ್ದಾರೆ.
ಟೆಲಿಫೋನ್ ಕಂಪನಿಯಿಂದಲೇ ಉತ್ತರ ಬಯಸಿದ ಡಿ.ಕೆ.ಎಸ್
ಡಿ.ಕೆ. ಶಿವಕುಮಾರ್ ಅವರ ಎರಡೂ ಪರ್ಸನಲ್ ನಂಬರ್ಗಳು ಏರ್ಟೆಲ್ ಕಂಪನಿಯದ್ದು. ಈ ಎರಡು ಸಂಖ್ಯೆಗಳ ಒಳಬರುವ ಹಾಗೂ ಹೊರ ಹೋಗುವ ಕರೆಗಳನ್ನು ಕದ್ದಾಲಿಸುತ್ತಿರುವ ಸಂಶಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಫೋನ್ ಟ್ಯಾಪಿಂಗ್ ಬಗ್ಗೆ ಏರ್ಟೆಲ್ ಕಂಪನಿ ಮುಖ್ಯಸ್ಥರಿಗೆ ಪತ್ರ ಬರೆದು, ಕದ್ದಾಲಿಕೆಯ ಬಗ್ಗೆ ಪತ್ತೆ ಹಚ್ಚಿ ಸತ್ಯಾಸತ್ಯತೆ ತಿಳಿಸುವಂತೆ ಮನವಿ ಮಾಡಲು ಮುಂದಾಗಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋ ಅವರು ಇಂದೇ ಪತ್ರ ರವಾನಿಸುವ ಸಾಧ್ಯತೆ ಇದೆ. ಏರ್ಟೆಲ್ ಕಂಪನಿಯ ಅಧಿಕೃತ ಮಾಹಿತಿಯ ನಂತರ, ದೂರವಾಣಿ ಕದ್ದಾಲಿಕೆಯ ತನಿಖೆಗೆ ಒತ್ತಾಯಿಸಿ ಹೋರಾಟದ ರೂಪುರೇಷೆ ಬಗ್ಗೆ ನಿರ್ಧರಿಸಲು ಡಿಕೆಎಸ್ ಚಿಂತನೆ ನಡೆಸಿದ್ದಾರೆ. ತನಿಖೆಗೆ ಒಪ್ಪಿಸುವವರೆಗೂ ಪ್ರಕರಣ ಕೈಬಿಡದಿರಲು ನಿರ್ಧಾರ ಮಾಡಿದ್ದಾರೆ ಅಂತ ನ್ಯೂಸ್ ಫಸ್ಟ್ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.