ಬಂಡಾಯವಲ್ಲ., ಸೈದ್ಧಾಂತಿಕ ಭಿನ್ನತೆ; ಪಕ್ಷದ ಹಿತಕ್ಕಾಗಿ ದನಿ ಎತ್ತಿದೆ; ಸಚಿನ್​ ಪೈಲಟ್​ ಸಮರ್ಥನೆ

0

ರಾಜಸ್ಥಾನ ವಿಧಾನಸಭೆ ಕಲಾಪ ಆರಂಭಕ್ಕೂ ಮುನ್ನ ಸಿಎಂ ಅಶೋಕ್​ ಗೆಹ್ಲೋಟ್​ ಹಾಗೂ ಸಚಿನ್​ ಪೈಲಟ್​ ನಡುವಿನ ವೈಮನಸ್ಸನ್ನು ತಿಳಿಯಾಗಿಸಲು ಕಾಂಗ್ರೆಸ್​ ಹೈಕಮಾಂಡ್​ ಒಂದು ಹಂತದ ಯಶಸ್ಸು ಕಂಡಿದೆ.

ಪಕ್ಷದಿಂದ ಬಂಡಾಯವೆದ್ದು ಡಿಸಿಎಂ ಸ್ಥಾನ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಕಳೆದುಕೊಂಡಿರುವ ಸಚಿನ್​ ಪೈಲಟ್​ ಇಂದು ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸಿದರು. ಬಂಡಾಯದ ಬಳಿಕ ಇದೇ ಮೊದಲ ಬಾರಿಗೆ ಸಚಿನ್​ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದಾರೆ.

 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿನ್​ ಪೈಲಟ್​, ಬಂಡಾಯಕ್ಕೆ ಕಾರಣವಾಗಿದ್ದು, ಸೈದ್ಧಾಂತಿಕ ಭಿನ್ನಾಭಿಪ್ರಾಯವಷ್ಟೇ ಎಂದು ಹೇಳಿದ್ದಾರೆ. ಬಂಡಾಯದ ಆರಂಭದಿಂದಲೂ ನಾನು ಇದನ್ನೇ ಹೇಳುತ್ತ ಬಂದಿದ್ದೆ. ಪಕ್ಷದ ಹಿತವನ್ನು ಗಮನದಲ್ಲಿಟ್ಟುಕೊಂಡೇ ಇಂಥದ್ದೊಂದು ವಿಚಾರವನ್ನು ಎತ್ತಿದ್ದೆ ಎಂದು ತಿಳಿಸಿದರು.
ಬಿಜೆಪಿ ಸೇರ್ಪಡೆ ವಿಚಾರವನ್ನು ಮೊದಲಿನಿಂದಲೂ ನಿರಾಕರಿಸುತ್ತಲೇ ಬಂದಿದ್ದೇನೆ ಎಂದ ಸಚಿನ್​ ಪೈಲಟ್​, ಕೆಲವೊಂದು ವಿಚಾರಗಳಿಗೆ ಆದ್ಯತೆ ನೀಡಬೇಕಿತ್ತು. ನಾನು ಅದನ್ನೇ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಎಲ್ಲ ಭಿನ್ನಾಭಿಪ್ರಾಯಗಳು ತತ್ವ, ಸಿದ್ಧಾಂತಕ್ಕೆ ಸಂಬಂಧಿಸಿದ್ದು. ಇದನ್ನು ಬಹಿರಂಗಗೊಳಿಸಬೇಕಾಗಿದ್ದು, ಪಕ್ಷದ ಹಿತಾಸಕ್ತಿ ಉದ್ದೇಶದಿಂದ ಮುಖ್ಯವಾಗಿತ್ತು ಎಂದು ಮೊದಲಿನಿಂದಲೂ ಭಾವಿಸಿದ್ದೆ ಎಂದು ಸಚಿನ್​ ಪೈಲಟ್​ ಹೇಳಿದರು.

 

ರಾಜ್ಯದಲ್ಲಿ ಸರ್ಕಾರ ಉರುಳಿಸುವ ಪ್ರಯತ್ನ ನಡೆಯುತ್ತಿದೆ. ಪಕ್ಷದ ನಾಯಕರೇ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಸಚಿನ್​ ಪೈಲಟ್​ ವಿರುದ್ಧ ಸಿಎಂ ಅಶೋಕ್​ ಗೆಹ್ಲೋಟ್​ ಆರೋಪಿಸಿದ್ದರು. ಇದು ಬಲಾಬಲ ಪರೀಕ್ಷೆಗೂ ಕಾರಣವಾಗಿತ್ತು. ಸದ್ಯ ಗೆಹ್ಲೋಟ್​ ಬೆಂಬಲಿಗರು ಜೈಸಲ್ಮೇರ್​ನ ರೆಸಾರ್ಟ್​ನಲ್ಲಿ ಬೀಡು ಬಿಟ್ಟಿದ್ದರೆ, ಪೈಲಟ್​ ಬೆಂಬಲಿಗರು ಹರಿಯಾಣದ ಹೋಟೆಲ್​ನಲ್ಲಿದ್ದಾರೆ. ಆಗಸ್ಟ್​ 14ರಂದು ವಿಧಾನಸಭೆ ಅಧಿವೇಶನ ಆರಂಭವಾಗಬೇಕಿದೆ.

LEAVE A REPLY

Please enter your comment!
Please enter your name here