ಬಂದ್‌ಗೆ ಕೋಲಾರದಲ್ಲಿ ವ್ಯಾಪಕ ಬೆಂಬಲ

0

ಕೃಷಿ ಹಾಗೂ ಎಪಿಎಂಸಿ ತಿದ್ದುಪಡಿ ಮಸೂದೆ ಖಂಡಿಸಿ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿಯು ‘ಕರ್ನಾಟಕ ಬಂದ್‌’ಗೆ ಕರೆ ಕೊಟ್ಟಿದ್ದರಿಂದ ಜಿಲ್ಲೆಯಾದ್ಯಂತ ಸೋಮವಾರ ವಾಣಿಜ್ಯ ವಹಿವಾಟು ಹಾಗೂ ಬಸ್‌ ಸೇವೆ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತವಾಯಿತು.

ಬಂದ್‌ ಹಿನ್ನೆಲೆಯಲ್ಲಿ ಇಡೀ ದಿನ ಅಂಗಡಿಗಳು ಮುಚ್ಚಿದ್ದವು. ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಡಿಪೊದಲ್ಲೇ ನಿಲ್ಲಿಸಲಾಗಿತ್ತು. ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲೇ ಇಲ್ಲ. ಸರಕು ಸಾಗಣೆ ವಾಹನ ಸೇವೆಯಲ್ಲಿ ವ್ಯತ್ಯಯವಾಗಿ ಜನಜೀವನಕ್ಕೆ ತೀವ್ರ ತೊಂದರೆಯಾಯಿತು.

ಬ್ಯಾಂಕ್‌, ಅಂಚೆ ಕಚೇರಿ, ಬಿಎಸ್‌ಎನ್‌ಎಲ್‌ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಕೆಲ ಹೊತ್ತು ಕಾರ್ಯ ಚಟುವಟಿಕೆ ನಡೆದವು. ಬಳಿಕ ವಿವಿಧ ಸಂಘಟನೆಗಳ ಸದಸ್ಯರು ಖಾಸಗಿ ಕಂಪನಿ ಹಾಗೂ ಸರ್ಕಾರಿ ಕಚೇರಿಗಳನ್ನು ಬಲವಂತವಾಗಿ ಮುಚ್ಚಿಸಿದರು. ಅಲ್ಲದೇ, ಆಟೊಗಳನ್ನು ತಡೆದು ಬಂದ್‌ ಬೆಂಬಲಿಸುವಂತೆ ಒತ್ತಾಯಿಸುತ್ತಿದ್ದ ದೃಶ್ಯ ಹಲವೆಡೆ ಕಂಡುಬಂತು.

ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಬಸ್‌ಗಾಗಿ ಗಂಟೆಗಟ್ಟಲೇ ಕಾಯುತ್ತಾ ಕುಳಿತಿದ್ದರು. ಕೊನೆಗೂ ಬಸ್‌ ಬಾರದಿದ್ದರಿಂದ ಪ್ರಯಾಣ ಮೊಟಕುಗೊಳಿಸಿ ಮನೆಯತ್ತ ಹೆಜ್ಜೆ ಹಾಕಿದರು. ಸಾರ್ವಜನಿಕರು ಅನಿವಾರ್ಯವಾಗಿ ಸರಕು ಸಾಗಣೆ ಆಟೊಗಳಲ್ಲಿ ಸಂಚರಿಸುತ್ತಿದ್ದ ದೃಶ್ಯ ಹಲವೆಡೆ ಕಂಡುಬಂತು.

ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿ ಕಡಿಮೆ ಇತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಕೆಲ ಎಟಿಎಂ ಕೇಂದ್ರಗಳನ್ನು ಮುಚ್ಚಲಾಗಿತ್ತು. ಇದರಿಂದ ಗ್ರಾಹಕರು ತೊಂದರೆ ಅನುಭವಿಸಿದರು. ಆಸ್ಪತ್ರೆಗಳು, ಔಷಧ ಮಾರಾಟ ಮಳಿಗೆಗಳು ಎಂದಿನಂತೆ ಸೇವೆ ಒದಗಿಸಿದವು. ಪೆಟ್ರೋಲ್‌ ಬಂಕ್‌ಗಳಲ್ಲಿ ವಹಿವಾಟು ಸಹಜವಾಗಿತ್ತು.

ಆಕ್ರೋಶ ವ್ಯಕ್ತ: ರಸ್ತೆ ತಡೆ, ಬೈಕ್‌ ರ್‌್ಯಾಲಿ, ಎತ್ತಿನ ಬಂಡಿ ಮೆರವಣಿಗೆ ನಡೆಸಿದ ವಿವಿಧ ಸಂಘಟನೆಗಳ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸದಾ ಜನಜಂಗುಳಿ ಮತ್ತು ವಾಹನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆಗಳು ಬಿಕೋ ಎನ್ನುತ್ತಿದ್ದವು. ಮಕ್ಕಳು ಕೆಎಸ್‌ಆರ್‌ಟಿಸಿ ನಿಲ್ದಾಣದೊಳಗೆ ಮತ್ತು ಮಾರುಕಟ್ಟೆ ಆವರಣದಲ್ಲಿ ಕ್ರಿಕೆಟ್‌ ಆಡಿ ಸಂಭ್ರಮಿಸಿದರು.

ಪೊಲೀಸ್‌ ಬಂದೋಬಸ್ತ್‌: ವರ್ತಕರು, ಹೋಟೆಲ್ ಮಾಲೀಕರ ಸಂಘ, ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳು, ಸಿಪಿಎಂ, ಕರ್ನಾಟಕ ಪ್ರಾಂತ ರೈತ ಸಂಘ, ಕಾಂಗ್ರೆಸ್‌ ಕಿಸಾನ್‌ ಖೇತ್‌ ಘಟಕ, ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಟಿಪ್ಪು ಸೆಕ್ಯೂಲರ್‌ ಸೇನೆ, ಸರಕು ಸಾಗಣೆ ವಾಹನ ಮಾಲೀಕರು ಮತ್ತು ಚಾಲಕರ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಬಂದ್‌ಗೆ ಬೆಂಬಲ ಸೂಚಿಸಿದರು.

ಸರ್ಕಾರಿ ಕಚೇರಿಗಳು, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಪ್ರಮುಖ ವೃತ್ತ, ರಸ್ತೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಜತೆಗೆ ಪೊಲೀಸ್‌ ಗಸ್ತು ಹೆಚ್ಚಿಸಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ನಿಯಮಿತವಾಗಿ ಗಸ್ತು ನಡೆಸಿದರು.

LEAVE A REPLY

Please enter your comment!
Please enter your name here