ಬದುಕು ಬೆಳಗಿಸಿದ ಕಂಚಿನ ಕಲೆ

0

ಕನ್ನಡ ನಾಡು ಕಲೆ-ಕಲಾವಿದರ ತವರೂರು, ವೈವಿಧ್ಯಮಯ ಕಲೆ ಈ ನಾಡಿನಲ್ಲಿ ತುಂಬಿ ತುಳುಕುತ್ತಿದೆ. ಕಂಚಿನ ಮೂರ್ತಿಗಳನ್ನು ತಯಾರಿಸಿ ಬದುಕು ಸಾಗಿಸುವವರ ಕುಟುಂಬಗಳು ನಮ್ಮ ನಾಡಿನ ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹನಗಂಡಿ ಎಂಬ ಚಿಕ್ಕ ಗ್ರಾಮದಲ್ಲಿದೆ. ಈ ಗ್ರಾಮ ಚಿಕ್ಕದಾದರೂ ಈ ನಾಡಿಗೆ ಅಷ್ಟೇ ಅಲ್ಲ ಇಡೀ ರಾಷ್ಟ್ರಕ್ಕೂ ಚಿರಪರಿಚಿತವಾಗಿದೆ.

ಈ ಗ್ರಾಮ ಲಾಳಕಿ ಮನೆತನದ ಶ್ರೀಕಾಂತ ಲಾಳಕಿ, ಸಲಬಣ್ಣ ಲಾಳಕಿ ಹಾಗೂ ಆನಂದ ಲಾಳಕಿ ಎಂಬುವವರು ಮೂರ್ತಿ ತಯಾರಿಕೆಯನ್ನೇ ಮೂಲ ವೃತ್ತಿಯಾಗಿಸಿಕೊಂಡು ಬಂದಿದ್ದಾರೆ. ಈಗಾಗಲೇ ನಲ್ಕೈದು ತಲೆಮಾರಿನವರು ಆಗಿ ಹೋಗಿದ್ದು, ತಾತ-ಮುತ್ತಾತರ ವೃತ್ತಿಯನ್ನೇ ಮುಂದುವರೆಸಿಕೊಂಡು ಕಂಚು, ತಾಮ್ರ, ಹಿತ್ತಾಳೆ ಪಂಚಲೋಹಗಳಿಂದ ಅತ್ಯಾಕರ್ಷಕ ಮೂರ್ತಿ ತಯಾರಿಸುವ ಇವರನ್ನು ಕಂಚುಗಾರು ಎಂದು ರೂಢಿಯಿಂದ ಕರೆಯುತ್ತಾರೆ. ಇವರು ತಯಾರಿಸಿದ ಕಲಾಕೃತಿಗೆ ತೂಕವನ್ನಾಧರಿಸಿ ಬೆಲೆ ನಿಗದಿಸುವ ವಾಡಿಕೆ. ಈವರು ತಮ್ಮಲ್ಲಿ ಎಲ್ಲ ತರಹದ ವಿಗ್ರಹಗಳನ್ನು, ಪೂಜಾ ಸಾಮಗ್ರಿಗಳನ್ನು, ಕಂಚಿನ ತಾಳ, ಜಾಂಗಟಿ, ಗಂಗಾಳ, ಗೋಪುರದ ಕಳಸ, ತೇರು ಹೀಗೆ ಮುಂತಾದ ಸಾಮಗ್ರಿಗಳನ್ನು ತಯಾರಿಸುತ್ತಾರೆ.

ಮೊದಲು ಮಣ್ಣು ತಂದು ಹದ ಮಾಡಿ ಬೇಕಾದ ಮೂರ್ತಿಯ ಕಚ್ಚಾ ಆಕೃತಿ ತಯಾರಿಸಿ ಅದರ ಮೇಲೆ ತೇಳುವಾದ ಮೇಣದ ಲೇಪನ ಮಾಡಿ ಅದಕ್ಕೆ ಪಟ್ಟಿ ಬಿಗಿದು ತಂತಿ ಹಾಕಿ ಬಿಗಿಯಾಗಿ ಕಟ್ಟಿ ಮತ್ತೆ ಮಣ್ಣು ಬಡಿಯುವರು. ಹೀಗೆ ತಯಾರಿಸಿದ ಕಚ್ಚಾ ಮೂರ್ತಿಯನ್ನು ಬಿಸಿಲಿನಲ್ಲಿ ಒಣಗಿಸುತ್ತಾರೆ. ನಂತರ ಒಂದು ಮೂಸೆಯಲ್ಲಿ ಹಿತ್ತಾಳೆ ಅಥವಾ ತಾಮ್ರವನ್ನು ಕರಗಿಸಿ ಅದನ್ನು ಕಚ್ಚಾ ಮೂರ್ತಿಯಲ್ಲಿ ಹಾಕಿದಾಗ ನಿಜವಾದ ಮೂರ್ತಿ ತಯಾರಾಗುತ್ತದೆ. ಮೇಲಿರುವ ಮಣ್ಣು ತೆಗೆದು ಉಳಿಯಿಂದ ಮೂರ್ತಿ ಕೆತ್ತಿ ಶುಚಿಗೊಳಿಸಿ ಪಾಲಿಸ್ ಮಾಡುತ್ತಾರೆ. ಅವಾಗ ಪಳಪಳ ಹೊಳೆಯುವ ಮೂರ್ತಿ ತಯಾರಾಗುತ್ತದೆ.

ಮೂರ್ತಿ ತಯಾರಿಕೆಯಲ್ಲಿ ಹೆಸರು ಸಂಪಾದಿಸಿರುವ ಲಾಳಕಿ ಕುಟುಂಬದ ಶ್ರೀಕಾಂತ, ಆನಂದ ಮತ್ತು ಸಲಬಣ್ಣ ಅವರು ತುರನೂರಿಗೆ ಐದುವರೆ ಪೂಟ್ ಎತ್ತರದ ಕಂಚಿನ ಪ್ರತಿಮೆಯನ್ನು, ಮೂರು ಪೂಟ್ ಎತ್ತರದ ಎರಡು ಟಗರುಗಳನ್ನು, ಅಪಜಲಪೂರಕ್ಕೆ ಏಳುವರೆ ಪೂಟ್ ಎತ್ತರದ ಕಂಚಿನ‌ ತೇರು, ಕೊಟ್ಟಲಗಿಯ ಆರು ಪೂಟ್ ಎತ್ತರದ ಸೈನಿಕ ಪ್ರತಿಮೆಯನ್ನು, ಬಸನಕೊಪ್ಪಕ್ಕೆ ಆರು ಪೂಟ್ ಎತ್ತರದ ಹನುಮಾನ ಪ್ರತಿಮೆ, ಕೌಜಗೇರಿ ಲಕ್ಷ್ಮೀ ಮೂರ್ತಿ, ಬೆನಕೊಪ್ಪಕ್ಕೆ ಆರು ಪೂಟ್ ಎತ್ತರದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹೀಗೆ ಚಿಕ್ಕದರಿಂದ ಬೃಹದ್ದಾಕಾರದ ಮೂರ್ತಿ ಪ್ರತಿಮೆಗಳನ್ನು ತಯಾರಿಸುತ್ತಾರೆ. ನರಗುಂದದ ಬೆನುಕೊಪ್ಪ ರಾಯಣ್ಣ ಪ್ರತಿಮೆಯು ರಾಯಣ್ಣ ಹುಟ್ಟಿದ ಸ್ವತಂತ್ರ ದಿನದಂದು ಉದ್ಘಾಟನೆಗೊಳ್ಳುತ್ತದೆ. ಹೀಗೆ ರಾಜ್ಯಾದ್ಯಾಂತ ಮೂರ್ತಿಗಳನ್ನು ತಯಾರಿಸಿ ಕೊಡುತ್ತಿದ್ದಾರೆ.

ಅನೇಕ ಶಿಲ್ಪಕಲಾ ಪ್ರದರ್ಶನದಲ್ಲಿ ಭಾಗವಹಿಸಿ ಪ್ರಶಸ್ತಿ, ಪುರಸ್ಕಾರ, ಸನ್ಮಾನ, ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರಿನಿಂದ ಪ್ರಶಸ್ತಿ, ಕನ್ನಡ ಮತ್ತು ಸಂಸ್ಕ್ರತಿಕ ಸಮಿತಿಯಿಂದ ಸನ್ಮಾನ, ರಾಷ್ಟ್ರಮಟ್ಟದ ಕಲಾ ಪ್ರದರ್ಶನದಲ್ಲಿ ಬಹುಮಾನ, ಕಲಾ ಪ್ರದರ್ಶನ ಮತ್ತು ಪ್ರಶಸ್ತಿ ಪುರಸ್ಕಾರ ಪ್ರಧಾನ ಹೀಗೆ ಹತ್ತು ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ತಮ್ಮ ಜೀವನದೂದ್ದಕ್ಕೂ ಶಿಲ್ಪಕಲೆಯಲ್ಲಿ ತೊಡಗಿರುವ ಹನಗಂಡಿ ಗ್ರಾಮದ ಲಾಳಕಿ ಕುಟುಂಬ ಕಂಚುಗಾರರೆಂದೇ ಪ್ರಸಿದ್ದವಾಗಿದೆ. ತಮಗೆ ಯಾವುದೆ ಕಂಚಿನ, ಮೇಣದ, ಹಿತ್ತಾಳೆಯ ಅಥವಾ ಬೆಳ್ಳಿಯ ಮೂರ್ತಿಗಳು, ಪ್ರತಿಮೆಗಳು, ಪೂಜಾ ಸಾಮಗ್ರಿಗಳು ಬೇಕಾದರೆ – 9740816916, 9845414334, 7090515335 ಈ ನಂಬರಗಳಿಗೆ ಸಂಪರ್ಕಿಸಿ. ಆಕರ್ಷಕ ಮೂರ್ತಿ ತಯಾರಿಸುವ ಹನಗಂಡಿ ಕಂಚುಗಾರರ ಬದುಕು ಹಸನಾಗಿಲ್ಲ ಈ ಶಿಲ್ಪಿಗಳು ಭಾರತದ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಇಂತಹ ಕುಟುಂಬಗಳು ರಾಜ್ಯ ಮತ್ತು ಕೆಂದ್ರ ಸರ್ಕಾರದ ಪ್ರೋತ್ಸಾಹದಿಂದ ವಂಚಿತರಾಗಿದ್ದಾರೆ. ಈ ಶಿಲ್ಪಿಗಳನ್ನು ಬೆಳೆಸಿದರೆ ಭಾರತೀಯ ಸಂಸ್ಕೃತಿಯು ಉಳಿದು ಬೆಳೆದು ಹೆಮ್ಮರವಾಗುತ್ತದೆ.

– ರಮೇಶ ಇಟಗೋಣಿ
ಸಾ. ಹನಗಂಡಿ
ತಾ. ರಬಕವಿ-ಬನಹಟ್ಟಿ
ಜಿ. ಬಾಗಲಕೋಟ
ಮೋ. 7204637119

 

LEAVE A REPLY

Please enter your comment!
Please enter your name here