ನಗರದ ಎನ್. ಆರ್.ವೃತ್ತದಲ್ಲಿ ಸೋಮವಾರ ತಡರಾತ್ರಿ ನಿರ್ಗತಿಕ ಮಹಿಳೆ ಕೊಲೆಗೈದು ಅತ್ಯಾಚಾರ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಆರೋಪಿ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ.
ಸಮೀಪದ ಅಂಗಡಿಯಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಯಲ್ಲಿ ಆರೋಪಿಯ ಸುಳಿವು ಸಿಕ್ಕಿದ್ದು, ಪೊಲೀಸ್ ತಂಡವೂ ಹೆಡೆಮುರಿ ಕಟ್ಟಲು ತನಿಖೆ ತೀವ್ರಗೊಳಿಸಿದೆ.
ಬೇಲೂರಿನ ಸುಮಾರು 40 ರಿಂದ 45 ವರ್ಷದ ಮಹಿಳೆ ದಶಕಗಳ ಹಿಂದೆಯೇ ಊರು ಬಿಟ್ಟು ಹಾಸನ ಸೇರಿ, ಭಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಿದ್ದರು. ಸ್ಥಳೀಯ ನಿವಾಸಿಗಳ ಪ್ರಕಾರ ಹಾಸನದ ಎನ್.ಆರ್.ವೃತ್ತದಲ್ಲಿರುವ ಕನ್ನಿಕಾ ಪರಮೇಶ್ವರಿ ಬ್ಯಾಂಕ್ ಮುಂಭಾಗ ಮಲಗುತ್ತಿದ್ದರು.
ಸೋಮವಾರ ಮಧ್ಯರಾತ್ರಿ ಸ್ಥಳಕ್ಕೆ ಬಂದ 35 ವರ್ಷದ ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದ ವ್ಯಕ್ತಿ, ಮಹಿಳೆ ಬಳಿ ಹೋಗಿ ಕಾಮತೃಷೆ ತೀರಿಸಿಕೊಳ್ಳಲು ಬಲವಂತ ಮಾಡಿದ್ದಾನೆ. ಇದಕ್ಕೆ ನಿರಾಕರಿಸಿದಾಗ ಅಲ್ಲಿಂದ ಹೊರಟು, ಮಹಿಳೆ ನಿದ್ರೆಗೆ ಜಾರುತ್ತಿದ್ದಂತೆ ಮತ್ತೆ ಬಂದು ಸಿಮೆಂಟ್ ಇಟ್ಟಿಗೆಯಿಂದ ಆಕೆ ತಲೆ ಮೇಲೆ ಎತ್ತಿ ಹಾಕಿದ್ದಾನೆ. ನಂತರ ಆಕೆ ಸತ್ತಳೆಂದು ದೃಢವಾದ ಬಳಿಕ, ಕಾಮತೃಷೆ ತೀರಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
‘ಕೊಲೆಯಾದ ಮಹಿಳೆಯ ಕುಟುಂಬದ ಸದಸ್ಯರಿಗೂ ಮಾಹಿತಿ ರವಾನಿಸಲಾಗಿದೆ. ಆರೋಪಿಯ ಸುಳಿವು ಸಿಕ್ಕಿದ್ದು, ಆದಷ್ಟು ಬೇಗ ಆತನನ್ನು ಬಂಧಿಸಿ ಕ್ರಮಕೈಗೊಳ್ಳಲಾಗುವುದು’ಎಂದು ಎಸ್ಪಿ ಶ್ರೀನಿವಾಸ್ ಗೌಡ ಭರವಸೆ ನೀಡಿದ್ದಾರೆ.