ಬೆಳಗಾವಿಯಲ್ಲಿ ಪ್ರವಾಹ ತಪ್ಪಿಸಲು ಮುಂದಾದ ಸಚಿವ ರಮೇಶ್​​​ ಜಾರಕಿಹೊಳಿ – ಒತ್ತುವರಿ ನದಿಗಳ ಸರ್ವೇಗೆ ನಿರ್ಧಾರ

0

 ಬೆಳಗಾವಿ ಜಿಲ್ಲೆಯಲ್ಲಿ ಸತತ ಎರಡು ವರ್ಷಗಳಿಂದ ನಾಲ್ಕು ಸಲ ಪ್ರವಾಹಕ್ಕೆ ಜನ ತತ್ತರಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಆಸ್ತಿಪಾಸ್ತಿ ಹಾನಿಯಾಗಿದೆ. ಇಲ್ಲಿನ ಬೆಳೆ, ಮನೆಗಳು ಹಾನಿಯಾಗಿವೆ. ಇನ್ನೂ ಅನೇಕ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಈ ಮಧ್ಯೆಯೇ ಪ್ರವಾಹಕ್ಕೆ ಮೂಲ ಕಾರಣವಾವ ನದಿಗಳ ಒತ್ತುವರಿ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಜಿಲ್ಲೆಯ ಮಲ್ರಪಭಾ, ಘಟಪ್ರಭಾ, ಮಾರ್ಕಂಡಯ್ಯ, ಹಿರಣ್ಯಕೇಶಿ ಹಾಗೂ ಬಳ್ಳಾರಿ ನಾಲಾದಿಂದ ಪ್ರವಾಹ ಉಂಟಾಗಿದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಅತಿವೃಷ್ಠಿಯಾಗಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ರೈತರು ಬೆಳೆದ ಕಬ್ಬು, ಮೆಕ್ಕೆಜೋಳ, ಹೆಸರು, ಜೋಳ ರೀತಿಯ ಬೆಳೆಗಳು ಹಾನಿಯಾಗೀಡಾಗಿವೆ. ಸಾವಿರಾರು ಮನೆಗಳು ನೆಲಸಮಗೊಂಡಿವೆ. ಪ್ರವಾಹ ಸ್ಥಿತಿಯಿಂದ ಜಿಲ್ಲೆಯ ಜನರ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಜನ ಭಯದ ನಡುವೆಯೆ ಜೀವನ ನಡೆಸುತ್ತಿದ್ದಾರೆ. ಪ್ರವಾಹ ಸ್ಥಿತಿಗೆ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಆಗೋ ಮಳೆಯ ಪ್ರಮುಖ ಕಾರಣ ಎಂದೇ ಹೇಳಲಾಗುತ್ತಿದೆ. ಇದರ ಜತೆಗೆ ಪ್ರಮುಖವಾಗಿ ಜಿಲ್ಲೆಯ ನದಿಗಳ ಒತ್ತುವರಿ ಸಹ ಪ್ರವಾಹ ಉಂಟಾಗಲು ಕಾರಣ ಆಗಿದೆ. ಈ ಬಗ್ಗೆ ಈವರೆಗೆ ಯಾರೊಬ್ಬರು ನದಿಗಳ ಸರ್ವೇ ಕಾರ್ಯಕ್ಕೆ ಕೈ ಹಾಕಿರಲಿಲ್ಲ. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸರ್ವೇ ಕಾರ್ಯ ನಡೆಸಲು ಮುಂದಾಗಿದ್ದಾರೆ. ಇದಕ್ಕಾಗಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿಯೊಂದು ಶೀಘ್ರದಲ್ಲಿಯೇ ಅಸ್ತಿತ್ವಕ್ಕೆ ಬರಲಿದೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ರಮೇಶ ಜಾರಕಿಹೊಳಿ, ಶೀಘ್ರದಲ್ಲಿಯೇ ಸಮಿತಿಯ ಸಭೆಯನ್ನು ನಡೆಸುತ್ತೇನೆ. ಜತೆಗೆ ಸರ್ವೇ ಕಾರ್ಯ ನಡೆಸಿದ ಬಳಿಕ ಗ್ರಾಮಗಳ ಸ್ಥಳಾಂತರ, ಒತ್ತುವರಿ ತೆರವು ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

ನವೀಲು ತೀರ್ಥ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರು ಬಿಟ್ಟರೆ ರಾಮದುರ್ಗ ತಾಲೂಕಿನ ಅನೇಕ ಗ್ರಾಮಗಳಿಗೆ ನೀರು ಸುತ್ತುವರಿಯುತ್ತದೆ. ಇದರಿಂದ ಪ್ರತಿವರ್ಷ ಅಲ್ಲಿನ ಜನ ಪರಿಹಾರ ಕೇಂದ್ರಕ್ಕೆ ಬಂದು ವಾಸಿಸೋ ಸ್ಥಿತಿ ಇರುತ್ತದೆ. ಜತೆಗೆ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆ ಸಹ ನೀರಿನಲ್ಲಿ ಮುಳುಗಿ ಹಾನಿಯಾಗುತ್ತದೆ. ಇದಕ್ಕೆಲ್ಲ ನದಿಗಳ ಸರ್ವೇ ಹಾಗೂ ಒತ್ತುವರಿ ತೆರವು ಪರಿಹಾರ ಎಂದೇಳಲಾಗುತ್ತಿದೆ.

ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಸಹ ಇಂದು ಸಚಿವ ರಮೇಶ ಜಾರಕಿಹೊಳಿಯನ್ನು ಭೇಟಿಯಾಗಿ, ಕಳಸಾ ಬಂಡೂರಿ ನೀರು ಮಲಪ್ರಭಾ ಸೇರುವ ಮೊದಲು ನದಿಯ ಸರ್ವೇಯನ್ನು ಮಾಡಿ ಒತ್ತುವರಿ ತೆರವು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ನದಿಗಳ ಒತ್ತುವರಿ ತೆರವು ಮಾಡದೇ ಇದ್ರೆ ಪ್ರತಿವರ್ಷ ಜನರಿಗೆ ಪ್ರವಾಹದಿಂದ ಸಮಸ್ಯೆ ಎದುರಾಗಲಿ ಎಂದು ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here