ಬೇಡಿಕೆ ಆಧರಿಸಿ ಕೋವಿಡ್-19 ಪರೀಕ್ಷೆ: ಕಂಟೈನ್‌ಮೆಂಟ್‌ ವಲಯದಲ್ಲಿ ಕಡ್ಡಾಯ

0

ಜನರ ಬೇಡಿಕೆ ಆಧರಿಸಿ ಕೋವಿಡ್-19 ಪರೀಕ್ಷೆ ನಡೆಸಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಲಹೆ ಮಾಡಿದೆ. ಆದರೆ, ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ವಿವೇಚನೆಯನ್ನು ಆಯಾ ರಾಜ್ಯಗಳಿಗೆ ಬಿಟ್ಟಿದೆ. ಈ ಸಂಬಂಧ ಹೊಸದಾಗಿ ಮಾರ್ಗದರ್ಶಿ ನಿಯಮಗಳನ್ನು ಹೊರಡಿಸಿದೆ.

ವಿದೇಶಿಯರು ಹಾಗೂ ಕೋವಿಡ್-19 ನೆಗೆಟಿವ್ ಹೊಂದಿರುವುದು ಕಡ್ಡಾಯ ಎಂಬ ನಿಯಮವಿರುವ ಅನ್ಯ ರಾಜ್ಯಗಳಿಗೆ ಪ್ರಯಾಣ ಬೆಳೆಸುವವರಿಗೂ ಬೇಡಿಕೆ ಆಧರಿಸಿ ವ್ಯಕ್ತಿಗತವಾಗಿ ಪರೀಕ್ಷೆಗೆ ಒಳಪಡಿಸಬಹುದು ಎಂದು ಐಸಿಎಂಆರ್ ತಿಳಿಸಿದೆ.

ಕೋವಿಡ್ ತಪಾಸಣೆ ಕುರಿತ ಮಾರ್ಗದರ್ಶಿ ನಿಯಮಗಳು (ನಾಲ್ಕನೇ ಆವೃತ್ತಿ) ಅನ್ನು ಬಿಡುಗಡೆ ಮಾಡಿದ್ದು, ಬೇಡಿಕೆ ಆಧರಿಸಿ ತಪಾಸಣೆ ನಡೆಸುವಂತೆ ಎಲ್ಲ ರಾಜ್ಯ ಸರ್ಕಾರಗಳು ನಿಯಮಗಳನ್ನು ಸರಳಗೊಳಿಸಬೇಕು ಎಂದು ತಿಳಿಸಿದೆ.

ಆದರೆ, ಕಂಟೈನ್‌ಮೆಂಟ್‌ ವಲಯದಲ್ಲಿ ವಾಸವಿರುವ ಎಲ್ಲರಿಗೂ ಆಯಂಟಿಜೆನ್ ತಪಾಸಣೆ ನಡೆಸುವುದು ಕಡ್ಡಾಯ. ಮುಖ್ಯವಾಗಿ ಸೋಂಕು ವ್ಯಾಪಕವಾಗಿರುವ ನಗರಗಳಲ್ಲಿ ಇದನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ತಿಳಿಸಲಾಗಿದೆ.

ಹೆರಿಗೆ ಸೇರಿದಂತೆ ಯಾವುದೇ ತುರ್ತು ಪ್ರಕ್ರಿಯೆಗಳನ್ನು ತಪಾಸಣೆ ಸೌಲಭ್ಯ ಕೊರತೆಯ ಕಾರಣಕ್ಕೆ ವಿಳಂಬ ಮಾಡಬಾರದು. ಸೌಲಭ್ಯವಿಲ್ಲದ ಕಾರಣಕ್ಕೆ ಗರ್ಭಿಣಿಯರನ್ನು ಅನ್ಯ ಆಸ್ಪತ್ರೆಗಳಿಗೆ ಶಿಫಾರಸು ಮಾಡಬಾರದು ಎಂದು ತಿಳಿಸಿದೆ.

ಕೋವಿಡ್-19 ತಪಾಸಣೆಗೆ ಸಂಬಂಧಿಸಿದ ಶಿಫಾರಸುಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಪ್ರವೇಶ, ನಿರ್ಗಮನ ಪಾಯಿಂಟ್ ಗಳಲ್ಲಿ ನಿಯಮಿತವಾಗಿ ತಪಾಸಣೆ ನಡೆಸುವುದು, ಕಂಟೈನ್‌ಮೆಂಟ್ ಅಲ್ಲದ ಪ್ರದೇಶಗಳಲ್ಲಿ ಬೇಡಿಕೆ ಆಧರಿಸಿ ತಪಾಸಣೆ ನಡೆಸುವುದು ಹಾಗೂ ನಡೆಸಬೇಕಾದ ಪರೀಕ್ಷೆಗಳ ಸ್ವರೂಪವನ್ನು ಮಾರ್ಗದರ್ಶಿ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

ಪರೀಕ್ಷೆಗೆ ಸಂಬಂಧಿಸಿದಂತೆ ಆರ್.ಟಿ-ಪಿಸಿಆರ್, ಟ್ರೂನ್ಯಾಟ್ ಅಥವಾ ಸಿಬಿನಾಟ್, ಆಯಂಟಿಜೆನ್ ಪರೀಕ್ಷೆಯ ಆಯ್ಕೆಗಳಿವೆ. ಆಯಂಟಿಜೆನ್ ಪರೀಕ್ಷೆಯು ಪಟ್ಟಿಯ ಮೊದಲ ಸ್ಥಾನದಲ್ಲಿದ್ದು, ಉಳಿದವು ನಂತರದ ಆಯ್ಕೆಗಳಾಗಿವೆ.

LEAVE A REPLY

Please enter your comment!
Please enter your name here