ಬ್ಯಾಂಕ್‌ ಆಫ್‌ ಇಂಡಿಯಾಗೆ ₹ 54.19 ಕೋಟಿ ವಂಚನೆ: ಸಿಬಿಐ ಪ್ರಕರಣ

0

ಅಹಮದಾಬಾದ್‌: ಬ್ಯಾಂಕ್‌ ಆಫ್‌ ಇಂಡಿಯಾಗೆ ₹54.19 ಕೋಟಿ ವಂಚಿಸಿದ ಆರೋಪದಡಿ ವಡೋದರ ಮೂಲದ ಮೇಫೇರ್‌ ಲೀಶರ್ಸ್‌ ಹಾಗೂ ಅದರ ನಿರ್ದೇಶಕರ ವಿರುದ್ಧ ಸಿಬಿಐ ಗುರುವಾರ ಎಫ್‌ಐಆರ್‌ ದಾಖಲಿಸಿದೆ.

ಈ ಕಂಪನಿಯನ್ನು 2011ರಲ್ಲಿ ಭಟ್ನಾಗರ್‌ ಕುಟುಂಬ ಪ್ರಾರಂಭಿಸಿದ್ದು, ಇದೇ ಕುಟುಂಬವು ಡೈಮಂಡ್‌ ಪವರ್‌ ಇನ್ಫ್ರಾಸ್ಟ್ರಕ್ಚರ್‌ ಲಿ.(ಡಿಪಿಐಎಲ್‌) ಕಂಪನಿಯನ್ನೂ ನಡೆಸುತ್ತಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. 11 ಬ್ಯಾಂಕ್‌ಗಳ ಒಕ್ಕೂಟಕ್ಕೆ ಅಂದಾಜು ₹2,600 ಕೋಟಿ ಸಾಲ ವಂಚನೆ ನಡೆಸಿದ ಆರೋಪದಡಿ 2018ರಲ್ಲಿ ಡಿಪಿಐಎಲ್‌ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಅಮಿತ್‌ ಭಟ್ನಾಗರ್‌, ಸುಮಿತ್‌ ಭಟ್ನಾಗರ್‌ ಹಾಗೂ ಇವರ ತಂದೆ ಸುರೇಶ್‌ ಭಟ್ನಾಗರ್‌ ಅವರನ್ನು ಸಿಬಿಐ ಬಂಧಿಸಿತ್ತು.

ಪಂಚತಾರಾ ಹೋಟೆಲ್‌ ನಿರ್ಮಾಣಕ್ಕೆ ಮೇಫೇರ್‌ ಲೀಶರ್ಸ್‌ಗೆ ನೀಡಿದ್ದ ಸಾಲವನ್ನು ಇತರೆ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂದು ಬ್ಯಾಂಕ್‌ ಆಫ್‌ ಇಂಡಿಯಾ ಇದೀಗ ಆರೋಪಿಸಿದೆ. ₹112.93 ಕೋಟಿ ವೆಚ್ಚದ ಹೋಟೆಲ್‌ ನಿರ್ಮಾಣಕ್ಕೆ 2012ರಲ್ಲಿ ಬ್ಯಾಂಕ್‌ ₹63 ಕೋಟಿ ಸಾಲವನ್ನು ಮಂಜೂರು ಮಾಡಿತ್ತು. ಇದನ್ನು ಇತರೆ ಉದ್ದೇಶಗಳಿಗೆ ಬಳಸಲಾಗಿರುವ ಕಾರಣ, ಬ್ಯಾಂಕ್‌ಗೆ ₹54.19 ಕೋಟಿ ನಷ್ಟವಾಗಿದೆ ಎಂದು ದೂರಿನಲ್ಲಿ ಬ್ಯಾಂಕ್‌ ಆಫ್‌ ಇಂಡಿಯಾ ಉಲ್ಲೇಖಿಸಿದೆ.

LEAVE A REPLY

Please enter your comment!
Please enter your name here