ಭಾರತ ಮತ್ತು ಚೀನಾ ಗಡಿ ಸಂಘರ್ಷ ದಿನೇದಿನೇ ಹೊಸ ತಿರುವು ಪಡೆಯುತ್ತಿದ್ದು, ಇದೀಗ ಟಿಬೆಟ್ ನಲ್ಲಿ ಚೀನಾ ಜಲಾಶಯ ನಿರ್ಮಿಸಲು ಮುಂದಾಗಿದ್ದು, ಈ ಮೂಲಕ ಜಲ ವಿವಾದಕ್ಕೆ ನಾಂದಿ ಹಾಡಿದೆ.
ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಚೀನಾ ನಿರ್ಮಿಸಲು ಉದ್ದೇಶಿಸಿದ್ದ 8 ಜಲಾಶಯಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಕೈಗೆತ್ತಿಕೊಂಡಿದೆ. ಭಾರತದ ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿರುವ ಟಿಬೆಟ್ ನ ಯಾರ್ಲಾಂಗ್ ತ್ಸಾಂಗ್ ಪೊ ಬಳಿ ಡ್ಯಾಂ ನಿರ್ಮಿಸಲಾಗುತ್ತಿದೆ.
ಸುಮಾರು 10 ವರ್ಷಗಳ ಅವಧಿಯಲ್ಲಿ 24 ಕಿ.ಮೀ. ವಿಸ್ತೀರ್ಣದಲ್ಲಿ 3 ಡ್ಯಾಂ ನಿರ್ಮಿಸಲು ಚೀನಾ ಉದ್ದೇಶಿಸಿದೆ. ಟ್ರಿಪ್ಲೆಟ್ ಡ್ಯಾಂ ಎಂದು ಕರೆಯಲಾಗುವ ಈ ಡ್ಯಾಂ ನಿರ್ಮಾಣದಿಂದ ಭಾರತಕ್ಕೆ ಹರಿದು ಬರುತ್ತಿರುವ ಬ್ರಹ್ಮಪುತ್ರ ನದಿ ತಡೆಯೊಡ್ಡಲಾಗುತ್ತಿದೆ. ಇದರಿಂದ ಭಾರತಕ್ಕೆ ಹರಿದು ಬರುತ್ತಿದ್ದ ನೀರನ ಪಾಲಿಗೆ ಕತ್ತರಿ ಬೀಳುವ ಸಾಧ್ಯತೆ ಇದ್ದು, ವಿವಾದ ಸ್ಫೋಟಗೊಳ್ಳುವ ಸಾಧ್ಯತೆ ಇದೆ.
ಚೀನಾ ಡ್ಯಾಂಗಳ ನಿರ್ಮಾಣಕ್ಕೆ ಮುಂದಾಗಿದ್ದು, ಕಾಮಗಾರಿ ಆರಂಭಿಸಿರುವ ಸ್ಯಾಟಲೈಟ್ ಚಿತ್ರಗಳು ಭಾರತಕ್ಕೆ ಲಭಿಸಿದ್ದು, ಭಾರತ ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಗಡಿ ಸಂಘರ್ಷ ಹಿನ್ನೆಲೆಯಲ್ಲಿ ಭಾರತ, ಚೀನಾದ 106 ಮೊಬೈ ಲ್ ಅಪ್ಲಿಕೇಶನ್ ಗಳನ್ನು ನಿರ್ಬಂಧಿಸಿದ್ದೂ ಅಲ್ಲದೇ ಟಿವಿಗಳ ಆಮದಿಗೆ ಕಡಿವಾಣ ಹಾಕಿದೆ. 5ಜಿ ತರಂಗಾಂತರ ಬಿಡ್ ನಿಂದ ನಿರ್ಬಂಧ ವಿಧಿಸುವುದೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡು ಚುರುಕು ಮುಟ್ಟಿಸಿದೆ.