ಭಾರತ-ಚೀನಾ ಗಡಿ ಸಂಘರ್ಷ: ‘ಶಾಂತಿಗೆ ಬದ್ಧ, ಸಮರಕ್ಕೂ ಸಿದ್ಧ’ ಎಂದ ಕೇಂದ್ರ ಸಚಿವ ರಾಜನಾಥ್​​ ಸಿಂಗ್​​

0

ಎಂದಿನಂತೆಯೇ ಭಾರತ-ಚೀನಾ ನಡುವಿನ ಗಡಿ ಸಂಘರ್ಷ ಮುಂದುವರಿದಿದೆ. ಅದನ್ನು ಬಗೆಹರಿಸಲು ಆಗುತ್ತಿಲ್ಲ. ಪರಸ್ಪರ ಎರಡೂ ದೇಶಗಳು ಪರಿಹಾರ ಕಂಡುಕೊಂಡಿಲ್ಲ. ಗಡಿಯಲ್ಲಿ ಚೀನಾ ಸೈನಿಕರು ತೀವ್ರ ಅಸಮ್ಮತಿ ತೋರುತ್ತಿದ್ದಾರೆ ಎಂದೇಳಲಾಗುತ್ತಿತ್ತು. ಈ ಮಧ್ಯೆಯೇ ಭಾರತ ಮತ್ತು ಚೀನಾ ಗಡಿ ಸಮಸ್ಯೆ ಬಗ್ಗೆ ಲೋಕಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತಾಡಿದ್ದಾರೆ. ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಿಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿವೆ. ದ್ವಿಪಕ್ಷೀಯ ಸಂಬಂಧಗಳ ಮತ್ತಷ್ಟು ಅಭಿವೃದ್ಧಿಗೆ ಎಂದರು. ಗಡಿಯ ಸಾಂಪ್ರದಾಯಿಕ ಜೋಡಣೆಯನ್ನು ಚೀನಾ ಒಪ್ಪುತ್ತಿಲ್ಲ. ಈ ಜೋಡಣೆ ಸುಸ್ಥಾಪಿತ ಭೌಗೋಳಿಕ ಪ್ರಾಮುಖ್ಯವನ್ನು ಆಧರಿಸಿದೆ ಎಂದು ನಾವು ಭಾವಿಸಿದ್ದೇವೆ. ಆದರೆ. ಚೀನಾ ಮಾತ್ರ ಏಕಪಕ್ಷೀಯವಾಗಿ ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸುವ ಪ್ರಯತ್ನ ಮಾಡಿದೆ ಎಂದರು. ನಾವು ಮಾತಾಡೋದೇ ಬೇರೆ, ನೈಜ ನಿಯಂತ್ರಣವೇ ಬೇರೆ. ಆಂತರಿಕ ಪ್ರದೇಶಗಳಲ್ಲಿ ಚೀನಾ ಅಪಾರ ಸಂಖ್ಯೆಯ ಸೇನಾ ಬೆಟಾಲಿಯನ್ ಆಯೋಜಿಸಿದೆ. ಇದಕ್ಕೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಿದೆ. ಪೂರ್ವ ಲಡಾಕ್, ಗೊಗ್ರಾ, ಕೊಂಗ್ಕಾ ಲಾ, ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳಲ್ಲಿ ಅನೇಕ ಘರ್ಷಣೆ ಕೇಂದ್ರಗಳಿವೆ. ಹೀಗಾಗಿ ಭಾರತೀಯ ಸೇನೆ ಈ ಪ್ರದೇಶಗಳಲ್ಲಿ ಸೇನೆ ನಿಯೋಜನೆ ಮಾಡಿದೆ ಎಂದರು. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಹೀಗೊಂದು ಭರವಸೆ ನೀಡಲು ಬಯಸುತ್ತೇನೆ. ಚೀನಾದ ರಕ್ಷಣಾ ಮಂತ್ರಿಯನ್ನು ಭೇಟಿಯಾಗಿದ್ದೆ. ಅವರಿಗೆ ನಮ್ಮ ಸೇನೆಯೂ ಗಡಿ ನಿರ್ವಹಣೆಯ ಬಗ್ಗೆ ಸರಿಯಾದ ಮಾರ್ಗವನ್ನು ತೆಗೆದುಕೊಂಡಿದೆ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಹೀಗಿದ್ದರೂ ಚೀನಾ ಮತ್ತೆ ಗಡಿ ಕ್ಯಾತೆ ತೆಗೆಯುವ ಸಾಧ್ಯತೆ ಇದೆ. ಆದ್ದರಿಂದ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಕಾಪಾಡಲು ಅಗತ್ಯ ಹೋರಾಟ ಮಾಡಲು ಸಜ್ಜಾಗಿದ್ದೇವೆ ಎಂದರು.

ಚೀನಾ ಹಿಂದಿನ ಎಲ್ಲ ಒಪ್ಪಂದಗಳ ಉಲ್ಲಂಘನೆ ಮಾಡಿದೆ. ಭಾರತದ ಭೂಭಾಗವನ್ನು ಕಾಪಾಡಲು ನಮ್ಮ ಸೇನೆ ಘರ್ಷಣಾ ಪ್ರದೇಶದಲ್ಲಿ ಬೆಟಾಲಿಯನ್​ ನಿಯೋಜನೆ ಮಾಡಿದೆ ಎಂದರು.

ಚೀನಾ ವಿರುದ್ಧ ಹೋರಾಡಲು ನಾವು ಸಿದ್ದರಿದ್ದೇವೆ. ಇದನ್ನು ಯಾರೂ ಅನುಮಾನಿಸಬಾರದು. ಭಾರತದ ಭೂಭಾಗ ರಕ್ಷಣೆಗೆ ನಮ್ಮ ಸಶಸ್ತ್ರ ಪಡೆಗಳ ಹೆಗಲಿಗೆ ಹೆಗಲು ನೀಡಲು ಸರ್ಕಾರ ತಯಾರಾಗಿದೆ ಎಂದರು.

ಪೂರ್ವ ಲಡಾಖ್​​ನಲ್ಲಿ ಚೀನಾದ ಅತಿಕ್ರಮಣ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಆದರೆ ಚೀನಾ ಸೈನಿಕರು ಹಿಂಸಾತ್ಮಕ ನಡೆಯ ಮೂಲಕ ಈ ಹಿಂದಿನ ಎಲ್ಲ ಒಪ್ಪಂದಗಳನ್ನೂ ಉಲ್ಲಂಘಿಸಿದ್ದಾರೆ. ಯಾವುದೇ ಸಂದರ್ಭ ಬಂದರೂ ಅದನ್ನು ಎದುರಿಸಲು ನಾವು ಸಮರ್ಥರಾಗಿದ್ದೇವೆ. ಭಾರತದ ಸಮಗ್ರತೆ ಮತ್ತು ಸಾರ್ವಭೌಮತ್ವ ಕಾಪಾಡಲು ಗಡಿಗಳನ್ನು ಕಾಯುತ್ತಿರುವ ಸಶಸ್ತ್ರಪಡೆಯೊಂದಿಗೆ ನಾವೆಲ್ಲರೂ ನಿಲ್ಲಬೇಕು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೇಳಿದರು.

LEAVE A REPLY

Please enter your comment!
Please enter your name here