ಭೂಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಾಗೂ ರೈತರ ಹೊಲಕ್ಕೆ ದಾರಿ ಕಲ್ಪಿಸಲು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರೈತರ ಜಮೀನಿಗೆ ಸಂಪರ್ಕ ಕಲ್ಪಿಸಲು ಸೂಕ್ತ ದಾರಿ ನಿರ್ಮಿಸಿಕೊಡಲು ಹಿಂದೇಟು ಹಾಕುವ ಸರ್ಕಾರ ತಮಗೆ ಅನುಕೂಲವಾಗುವಂತ ಕಾನೂನು ಜಾರಿಗೆ ತರುವ ಮೂಲಕ ಒಕ್ಕಲುತನವನ್ನು ನಾಶಮಾಡಲು ಹೊರಟಿದೆ. ಈ ಸರ್ಕಾರ ಸಂಪೂರ್ಣ ರೈತ ವಿರೋಧಿಯಾಗಿದೆ ಎಂದು ಆರೋಪಿಸಿದರು.
ರೈತರು ತಮ್ಮ ಜಮೀನುಗಳಿಗೆ ಹೋಗಲು ಹಾಗೂ ಬೆಳೆದ ಉತ್ಪನ್ನಗಳನ್ನು ತೆಗೆದುಕೊಂಡು ಬರಲು ದಾರಿ ಇಲ್ಲದೇ ವ್ಯವಸಾಯ ಮಾಡಲು ಆಗುತ್ತಿಲ್ಲ. ಇದರಿಂದ ಜಮೀನುಗಳು ಬೀಳು ಬೀಳುತ್ತಿವೆ. ಇಂತಹ ದಾರಿ ಸಮಸ್ಯೆ ಇರುವ ರೈತ ಕುಟುಂಬಗಳಿಗೆ ವ್ಯವಸಾಯ ಮಾಡದೇ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದರು.
ಮುಖಂಡ ಸದಾಶಿವ ಬರಟಗಿ ಮಾತನಾಡಿ, ರೈತರಿಗೆ ಮಾರಕವಾದ ಭೂ ಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಚನ್ನಪ್ಪಗೌಡ ಪಾಟೀಲ, ಅಶೋಕ ಅಲ್ಲಾಪೂರ, ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಸಿದ್ರಾಮ ಅಂಗಡಗೇರಿ, ಮುದ್ದುಗೌಡ ಪಾಟೀಲ, ಶಿವಶರಣಪ್ಪಗೌಡ ಪಾಟೀಲ, ಗುರು ಕೋಟ್ಯಾಳ, ಈರಣ್ಣ ದೇವರಗುಡಿ, ನಂದನಗೌಡ ಬಿರಾದಾರ, ಅರ್ಜುನ ಹಾವಗೊಂಡ, ಶಿವಪ್ಪ ಯರನಾಳ, ಶಿವಪ್ಪ ಮಂಗೊಂಡ, ಹೊನಕೇರೆಪ್ಪ ತೆಲಗಿ, ಲಕ್ಷ್ಮಣ ಶಿಂಧೋಳ, ರಮೇಶ ಶಿಂಧೋಳ, ಕಾಟೆಪ್ಪ ಶಿಂಧೋಳ, ಯಲ್ಲಪ್ಪ ಶಿಂಧೋಳ, ಜಂಬವ್ವ ಶಿಂಧೋಳ, ಲಕ್ಷ್ಮೀ ಶಿಂಧೋಳ, ಗುಂಡವ್ವ ಶಿಂಧೋಳ, ಬಾಬು ಕೋಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.