ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ: ಸ್ವಾತಂತ್ರೋತ್ಸವ ದಿನದಂದು ಪ್ರತಿಭಟನೆ

0

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರದ್ದು ಮಾಡಬೇಕು, ರೈತ ಜಯಂತಿಯನ್ನು ಪ್ರತಿ ವರ್ಷ ಸರ್ಕಾರವೇ ಆಚರಿಸಬೇಕು ಎನ್ನುವ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗಸ್ಟ್‌ 15ರಂದು ಬೆಳಿಗ್ಗೆ 9.30ಕ್ಕೆ ನವಲಗುಂದ ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ಒಂದು ದಿನ ಪ್ರತಿಭಟನೆ ಹಮ್ಮಿಕೊಂಡಿದೆ.

ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿರಾಜ ಕಂಬಳಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಅಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಪ್ರತಿಭಟನೆ ಆರಂಭಿಸಲಾಗುವುದು. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರೈತರ ಪಾಲಿಗೆ ಮರಣ ಶಾಸನದಂತಿದೆ. ಕೃಷಿ ಇಲ್ಲದವರು ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲಾಗಿದೆ. ಶ್ರೀಮಂತರು ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ವಾಮಮಾರ್ಗದ ಮೂಲಕ ಕರೆತರಲು ಕಾಯ್ದೆ ವೇದಿಕೆಯಾಗಲಿದೆ’ ಎಂದು ಆರೋಪಿಸಿದರು.

‘ರೈತರು, ಸ್ತ್ರೀಶಕ್ತಿ ಸಂಘದವರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೊಂದಿರುವ ಸಾಲ ಮನ್ನಾ ಮಾಡಬೇಕು. ಎಪಿಎಂಸಿ ಕಾಯ್ದೆ ತಿದ್ದುಪಡಿ ಅನ್ನದಾತರ ಪರವಾಗಿ ಇರಬೇಕು, 60 ವರ್ಷ ಮೇಲ್ಪಟ್ಟ ರೈತರಿಗೆ ₹3,000 ಮಾಸಾಶನ ನೀಡಬೇಕು, ಎಪಿಎಂಸಿಗಳಿಗೆ ಹುತಾತ್ಮ ರೈತರು ಹೆಸರು ನಾಮಕಾರಣ ಮಾಡಬೇಕು, ಕೃಷಿ ಚಟುವಟಿಕೆಗಳಿಗೆ ರೈತರಿಗೆ ತೈಲ ದರದಲ್ಲಿ ವಿನಾಯಿತಿ ನೀಡಬೇಕು, ಕಳಸಾ ಬಂಡೂರಿ ನಾಲಾ ಯೋಜನೆ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳಿಸಬೇಕು, ಪ್ರಕೃತಿ ವಿಕೋಪಕ್ಕೆ ಒಳಗಾದ ರೈತರಿಗೆ ಸರ್ಕಾರ ಸಕಾಲಕ್ಕೆ ಪರಿಹಾರ ಒದಗಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಹಸಿರು ಸೇನೆಯ ಬೆಳಗಾವಿ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಸವರಾಜ ಯು. ಬಿಜ್ಜೂರ ಮಾತನಾಡಿ ‘ಕೋವಿಡ್‌ನಿಂದ ರೈತರು ಸಂಕಷ್ಟದಲ್ಲಿದ್ದರೂ ಬ್ಯಾಂಕ್‌ನವರು ಹಾಗೂ ಫೈನಾನ್ಸ್‌ ಸಿಬ್ಬಂದಿ ಸಾಲ ವಾಪಸ್‌ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದರು.

 

LEAVE A REPLY

Please enter your comment!
Please enter your name here