ಮಹದೇಶ್ವರ ಬೆಟ್ಟದಲ್ಲಿ ಭಕ್ತರ ದಂಡು: ಕನಿಷ್ಠ ಅಂತರವೂ ಇಲ್ಲ, ಮಾಸ್ಕೂ ಧರಿಸಿರಲಿಲ್ಲ

0

ಗಾಂಧಿ ಜಯಂತಿ ಪ್ರಯುಕ್ತ ಶುಕ್ರವಾರ ರಜಾ ದಿನವಾಗಿದ್ದರಿಂದ ಇಲ್ಲಿನ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರಕ್ಕೆ ಭಾರಿ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡಿದ್ದರು.

ಕೋವಿಡ್‌-19 ಕಾರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಕಡ್ಡಾಯವಾಗಿದ್ದರೂ, ಬಹುತೇಕ ಭಕ್ತರು ಪಾಲನೆ ಮಾಡಲಿಲ್ಲ. ರಂಗ ಮಂದಿರ, ಲಾಡು ವಿತರಣೆ ಕೌಂಟರ್‌ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಭಕ್ತರು ಒತ್ತೊತ್ತಾಗಿ ನಿಂತುಕೊಂಡಿದ್ದರು. ಸರತಿ ಸಾಲಿನಲ್ಲಿ ನಿಂತುಕೊಳ್ಳುವಾಗಲೂ ಕನಿಷ್ಠ ಅಂತರ ಕಂಡು ಬರಲಿಲ್ಲ. ಕೆಲವರು ಮಾಸ್ಕ್‌ ಕೂಡ ಧರಿಸಿರಲಿಲ್ಲ. ಭಕ್ತರಿಗೆ ಸಿಬ್ಬಂದಿ ಕೂಡ ತಿಳಿ ಹೇಳುವ ಕೆಲಸ ಮಾಡಲಿಲ್ಲ.

ಬೆಳಿಗ್ಗೆ ಏಳು ಗಂಟೆಯಿಂದ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ರಜಾ ದಿನವಾಗಿದ್ದರಿಂದ ಭಕ್ತರು ಆ ಸಮಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ರಂಗಮಂದಿರದಲ್ಲಿ ಜಮಾಯಿಸಿದ್ದರು. ದೇವರ ದರ್ಶನಕ್ಕೆ ಗುಂಪು ಗುಂಪಾಗಿಯೇ ಮುಗಿಬಿದ್ದರು.

‘ದೇವಾಲಯಕ್ಕೆ ಬರುವ ಭಕ್ತರಿಗೆ ಸ್ಯಾನಿಟೈಸರ್ ವ್ಯವಸ್ಥೆ ಹಾಗೂ ಕುಳಿತುಕೊಳ್ಳಲು ಅಸನದ ವ್ಯವಸ್ಥೆಯನ್ನು ಕಲ್ಪಿಸಿರಲಿಲ್ಲ. ಎರಡು ಗಂಟೆ ಬಿಸಿಲಿನಲ್ಲೇ ನಿಲ್ಲಬೇಕಾಯಿತು. ರಂಗಮಂದಿರದ ಆವರಣ ತುಂಬಾ ವಿಶಾಲವಾಗಿದ್ದು, ಇಲ್ಲಿ ಸೀಮಿತಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಎಲ್ಲ ವ್ಯವಸ್ಥೆ ಮಾಡಿರಬಹುದು ಎಂದುಕೊಂಡು ಬಂದೆವು. ಬಂದಿರುವ ಭಕ್ತರು ಕನಿಷ್ಠ ಅಂತರವನ್ನು ಕಾಪಾಡಿಕೊಳ್ಳುತ್ತಿಲ್ಲ’ ಎಂದು ಬೆಂಗಳೂರಿನಿಂದ ಬಂದ ಭಕ್ತರಾದ ನಿರಂಜನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಳಬೆಟ್ಟದಲ್ಲಿ ವಾಸ್ತವ್ಯ: ಬೆಟ್ಟದಲ್ಲಿ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ. ಸಂಜೆ ಬರುವ ಭಕ್ತರನ್ನು ತಾಳಬೆಟ್ಟದಲ್ಲೇ ತಡೆಯಲಾಗುತ್ತಿದೆ. ಈ ಬಗ್ಗೆ ಮಾಹಿತಿ ಇಲ್ಲದ ಭಕ್ತರು ಸಂಜೆಯ ಹೊತ್ತು ಬರುತ್ತಾರೆ. ತಾಳಬೆಟ್ಟದ ಆಸುಪಾಸಿನಲ್ಲಿ ವಾಸ್ತವ್ಯ ಹೂಡುತ್ತಾರೆ. ಇನ್ನೂ ಕೆಲವರು ತಮ್ಮವಾಹನಗಳಲ್ಲೇ ರಾತ್ರಿ ಕಳೆಯುತ್ತಾರೆ.

ಶುಕ್ರವಾರ ಮಾದಪ್ಪನ ದರ್ಶನಕ್ಕಾಗಿ ಗುರುವಾರ ರಾತ್ರಿ ಹೆಚ್ಚಿನ ಸಂಖ್ಯೆಯ ಭಕ್ತರು ವಾಹನಗಳಲ್ಲಿ ಬಂದಿದ್ದರು. ಇಬ್ಬರು ಕಾನ್‌ಸ್ಟೆಬಲ್‌ಗಳು ಹಾಗೂ ಪ್ರಾಧಿಕಾರದ ಒಬ್ಬ ಸಿಬ್ಬಂದಿ ತಾಳಬೆಟ್ಟದಲ್ಲಿ ತಡೆದಿದ್ದರು. ರಾತ್ರಿ 11 ಗಂಟೆಯ ಸುಮಾರಿಗೆ ಇವರ ವಿರುದ್ಧ ತಿರುಗಿ ಬಿದ್ದ ಭಕ್ತರು ವಾಗ್ವಾದಕ್ಕೆ ಇಳಿದರು. ವಿಷಯ ತಿಳಿಯುತ್ತಿದ್ದಂತೆಯೇ ಬೆಟ್ಟದ ಠಾಣೆಯ ಇನ್‌ಸ್ಪೆಕ್ಟರ್‌ ರಮೇಶ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಗದ್ದಲವನ್ನು ತಿಳಿಗೊಳಿಸಿದರು.

ಹೆಚ್ಚಿನ ಸಿಬ್ಬಂದಿ ನಿಯೋಜಿಸಿ: ‘ಹೆಚ್ಚು ಭಕ್ತರು ಬಂದಂತಹ ಸಂದರ್ಭದಲ್ಲಿ ಅವರನ್ನು ನಿಯಂತ್ರಿಸಲು ಹೆಚ್ಚು ಪೊಲೀಸ್‌ ಸಿಬ್ಬಂದಿ ಬೇಕು. ಇಲಾಖೆ ಈ ನಿಟ್ಟಿನಲ್ಲಿ ಗಮನಹರಿಸುವ ಅಗತ್ಯವಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಕಾನ್‌ಸ್ಟೆಬಲ್‌ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನಿಭಾಯಿಸಲಾಗಿದೆ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು, ‘ಮೂರು ದಿನಗಳು ರಜೆ ಇರುವುದರಿಂದ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹಾಗಾಗಿ ಸ್ವಲ್ಪ ನೂಕು ನುಗ್ಗಲು ಏರ್ಪಟ್ಟಿತ್ತು. ಅದನ್ನು ನಾವು ನಾವು ನಿಭಾಯಿಸಿದ್ದೇವೆ. ಸರ್ಕಾರದ ಮಾರ್ಗಸೂಚಿಗಳನ್ನು ನಾವು ಪಾಲಿಸುತ್ತಿದ್ದೇವೆ. ಜಿಲ್ಲಾಧಿಕಾರಿ ಅವರ ಆದೇಶದಂತೆ ವಸತಿಗೃಹಗಳನ್ನು ಕೂಡ ನಾವು ನೀಡುತ್ತಿಲ್ಲ. ಏಕಾಏಕಿ ಭಕ್ತರ ಸಂಖ್ಯೆ ಜಾಸ್ತಿಯಾದ ಕಾರಣ ಸ್ವಲ್ಪ ತೊಂದರೆಯಾಗಿದೆ’ ಎಂದು ಹೇಳಿದರು.

‘ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಎಂಬುದರ ಬಗ್ಗೆ ಈಗಾಗಲೇ ಸಾಕಷ್ಟು ಪ್ರಚಾರ ಮಾಡಿದ್ದೇವೆ. ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕವೂ ತಿಳಿಸಲಾಗಿದೆ. ಭಕ್ತರು ಕೂಡ ಇದನ್ನು ತಿಳಿದುಕೊಳ್ಳಬೇಕು’ ಎಂದರು.

LEAVE A REPLY

Please enter your comment!
Please enter your name here