ಜಿಲ್ಲೆಯ ಜನರ ಶುಭ ಹಾರೈಕೆ ಹಾಗೂ ಆತ್ಮವಿಶ್ವಾಸದಿಂದ ಕೊರೊನಾ ಸೋಂಕಿನಿಂದ ಬೇಗ ಗುಣಮುಖನಾಗಲು ಸಾಧ್ಯವಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಪ್ರತಿಕ್ರಿಯಿಸಿದ್ದಾರೆ.
ಕೊರೊನಾ ಹೊಸ ಅನುಭವ ನೀಡಿತು. ಹಲವು ದಿನಗಳ ಕಾಲ ಜನರಿಂದ ದೂರ ಉಳಿಯಲು ಕಾರಣವಾಯಿತು ಎಂದು ಹೇಳಿದ್ದಾರೆ.
ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಉಳಿದು ಚಿಕಿತ್ಸೆ ಪಡೆದುಕೊಂಡಿದ್ದೇನೆ. ಈಗ ಸಂಪೂರ್ಣ ಗುಣಮುಖನಾಗಿದ್ದೇನೆ. ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕಿಗೆ ಒಳಗಾದ ಅವಧಿಯಲ್ಲೂ ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ. ತಮ್ಮ ಕಚೇರಿ ಎಂದಿನಂತೆಯೇ ಕಾರ್ಯ ನಿರ್ವಹಿಸಿದೆ ಎಂದು ಹೇಳಿದ್ದಾರೆ.
ಕಡ್ಡಾಯ ಮಾಸ್ಕ್ ಧರಿಸಿ: ಕೊರೊನಾ ಸೋಂಕಿಗೆ ಇನ್ನೂ ಲಸಿಕೆ ಬಂದಿಲ್ಲ. ಮಾಸ್ಕ್ ಒಂದೇ ಅದನ್ನು ತಡೆಯಲು ಇರುವ ಮಾರ್ಗವಾಗಿದೆ. ಆದರೂ, ಮಾಸ್ಕ್ ಧರಿಸುವಲ್ಲಿ ಜನ ನಿಷ್ಕಾಳಜಿ ತೋರುತ್ತಿದ್ದಾರೆ. ಇದೇ ಕಾರಣಕ್ಕಾಗಿಯೇ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಹೊರಗಡೆ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸುರಕ್ಷಿತ ಅಂತರ ಕಾಪಾಡಬೇಕು. ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ಮಾಡಿದ್ದಾರೆ.
ತಾವು ಔರಾದ್ ತಾಲ್ಲೂಕಿನ ಬೋಂತಿ ತಾಂಡಾದಲ್ಲಿದ್ದಾಗ ತಮ್ಮ ಆಪ್ತ ಸಹಾಯಕರನ್ನು ಸಂಪರ್ಕಿಸಿ ಬೆಳಿಗ್ಗೆ 8 ರಿಂದ 11 ಹಾಗೂ ಸಂಜೆ 4 ರಿಂದ 7 ರ ವರೆಗೆ ಸಾರ್ವಜನಿಕರು ತಮ್ಮನ್ನು ಭೇಟಿ ಮಾಡಬಹುದು. ಭೇಟಿಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿದ್ದಾರೆ.