ಗರ್ಭಿಣಿಯಾದವರಿಗೆ ಸೀಮಂತ ಮಾಡಿ, ಮಗು ಮಡಿಲಿಗೆ ಬರುವ ಸಂಭ್ರಮ, ಸಂತಸವನ್ನು ಹಂಚಿಕೊಳ್ಳುವ ಸಂಪ್ರದಾಯ ಹಲವೆಡೆ ಇದೆ. ಈ ಸಂತಸದ ಕಾರ್ಯ ಇದೀಗ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ದಾವಣಗೆರೆಯಲ್ಲಿ ಈಚೆಗೆ ಹಸುಗಳಿಗೂ ಸೀಮಂತ ಮಾಡಿದ್ದರು ಗೋವು ಪ್ರಿಯರು. ಈಗ ತಮ್ಮ ಮುದ್ದಿನ ಶ್ವಾನಕ್ಕೂ ಸೀಮಂತ ಮಾಡಿ ಸುದ್ದಿಯಾಗಿದೆ ವಿಜಯಪುರದ ಈ ಕುಟುಂಬ.
ವಿಜಯಪುರದ ಕನ್ನಡ ಪರ ಹೋರಾಟಗಾರ ಪ್ರಕಾಶ ಕುಂಬಾರ ತಮ್ಮ ಮನೆಯ ಸಾಕು ನಾಯಿ ಸೋನುಗೆ ಸೀಮಂತ ಕಾರ್ಯ ನಡೆಸಿದ್ದಾರೆ.
ಪ್ರಕಾಶ ಕುಂಬಾರ 6 ತಿಂಗಳ ಹಿಂದೆ ಪೊಮೆರೇನಿಯನ್ ತಳಿಯ ಶ್ವಾನವನ್ನು ಮನೆಗೆ ತಂದಿದ್ದರು. ಇದೀಗ ಆ ಶ್ವಾನ ಗರ್ಭಿಣಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಮರಿಗಳಿಗೆ ಜನ್ಮ ನೀಡಲಿದೆ. ಹೀಗಾಗಿ ಈ ಕ್ಷಣವನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಬೇಕು ಎಂದು ನಿರ್ಧರಿಸಿ ಪ್ರಕಾಶ ಕುಂಬಾರ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಸೇರಿ ಶ್ವಾನಕ್ಕೆ ಸೀಮಂತ ಮಾಡಿದ್ದಾರೆ. ಸೀಮಂತ ಕಾರ್ಯಕ್ರಮದಲ್ಲಿಶ್ವಾನಕ್ಕೆ ಉಡುಗೊರೆಗಳನ್ನೂ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಒಂದಷ್ಟು ಜನ ಸೇರಿ ಶ್ವಾನಕ್ಕೆ ಬಳೆ ತೊಡಿಸಿ ಹಾಡು ಹೇಳಿ, ಹೂವಿನ ಹಾರ ಹಾಕಿ ಸಿಂಗಾರ ಗೊಳಿಸಿದರು. ಸೀಮಂತಕ್ಕೆ ಬಂದವರಿಗೆ ಊಟೋಪಚಾರವನ್ನೂ ಏರ್ಪಡಿಸಲಾಗಿತ್ತು.