‘ಕೋವಿಡ್ ಸಾಂಕ್ರಾಮಿಕ ರೋಗದ ನಡುವೆಯೂ ಜನಜೀವನವನ್ನು ಹಂತ ಹಂತವಾಗಿ ಸಹಜ ಸ್ಥಿತಿಗೆ ತರಲಾಗುತ್ತಿದೆ. ನಗರದಲ್ಲಿ ನಮ್ಮ ಮೆಟ್ರೊ ಸೇವೆಯನ್ನೂ ಶೀಘ್ರವೇ ಪುನರಾರಂಭ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದ ಗಾಂಧಿನಗರ ವಿಧಾನ ಸಭಾ ಕ್ಷೇತ್ರದಲ್ಲಿರುವ ಆನಂದ ರಾವ್ ವೃತ್ತದ ಮೇಲ್ಸೇತುವೆಗೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಹೆಸರು ನಾಮಕರಣ ಸಮಾರಂಭದ ಬಳಿಕ ಅವರು ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದರು.
ನಗರದಲ್ಲಿ ಕೋವಿಡ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಜಾರಿಗೊಳಿಸಿದ ಬಳಿಕ ನಮ್ಮ ಮೆಟ್ರೊ ಸೇವೆಯನ್ನೂ ಸ್ಥಗಿತಗೊಳಿಸಲಾಗಿತ್ತು. ಮಾ.23 ರಂದು ಸ್ಥಗಿತಗೊಂಡಿರುವ ಮೆಟ್ರೊ ಸೇವೆ ಇನ್ನೂ ಆರಂಭವಾಗಿಲ್ಲ.
‘ನಗರದ ಮೂಲಸೌಕರ್ಯ ಸುಧಾರಣೆ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುವುದು ರಾಷ್ಟ್ರದ ಅಭಿವೃದ್ಧಿಯ ದೃಷ್ಟಿಯಿಂದಲೂ ಅಗತ್ಯ. ಬೆಂಗಳೂರು ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ’ ಎಂದು ಮುಖ್ಯಮಂತ್ರಿ ತಿಳಿಸಿದರು.
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟೀಷರ ವಿರುದ್ಧ ಸೆಣಸಿದ ಕನ್ನಡ ಕಲಿ. ಕಿತ್ತೂರು ಚೆನ್ನಮ್ಮನ ಬಲಗೈ ಬಂಟನಾಗಿ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಕೊನೆ ಉಸಿರು ಇರುವವರೆಗೂ ಹೋರಾಟ ನಡೆಸಿದ ವ್ಯಕ್ತಿ. ಅವರು ಯುವಜನತೆಗೆ ಸ್ಫೂರ್ತಿ. ಅಂತಹ ಮಹಾನ್ ವ್ಯಕ್ತಿಯ ಹೆಸನ್ನು ಮೇಲ್ಸೇತುವೆಗೆ ಇಟ್ಟಿರುವುದು ಔಚಿತ್ಯಪೂರ್ಣ’ ಎಂದರು.