”ಯಾವುದೇ ಹುದ್ದೆ ನಿಭಾಯಿಸುವ ಸಾಮರ್ಥ್ಯ ಲಕ್ಷ್ಮಿ ಅವರಿಗಿದೆ”

0

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ, ಮಹಿಳಾ ಕಾಂಗ್ರೆಸ್ ರಾಜ್ಯ ಮಾಜಿ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕರ್ನಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.

ಬೆಳಗಾವಿ ಜಿಲ್ಲಾ ಕಾಂಗ್ರೆಸ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾಂಗ್ರೆಸ್ ವಲಯದಲ್ಲಿ ಪ್ರಭಾವಿ ರಾಜಕಾರಣಿಯಾಗಿ ಬೆಳದಿದ್ದು, ಅವರಿಗೆ ಯಾವುದೇ ವಿಷಯವನ್ನು ಸಮರ್ಥವಾಗಿ ಮಂಡಿಸುವ, ನಿರ್ವಹಿಸುವ ಸಾಮರ್ಥ್ಯವಿದೆ. ಪಕ್ಷ ಸಂಘಟನೆ, ಸಮಸ್ಯೆ ನಿರ್ವಹಣೆಯಲ್ಲಿ ಅನುಭವ ಹೊಂದಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕೆಪಿಸಿಸಿ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ. ಈ ಪತ್ರ ತಲುಪಿದ ಕೂಡಲೇ ಅಧಿಕಾರ ವಹಿಸಿಕೊಂಡು ಕಾರ್ಯಪ್ರವೃತ್ತರಾಗುತ್ತಿರೆಂದು ಆಶಿಸುತ್ತೇನೆ ಎಂದು ತಮ್ಮ ನೇಮಕಾತಿ ಆದೇಶ ಪತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ತಮ್ಮ ರಾಜಕೀಯ ಗುರುಗಳು ಅಧ್ಯಕ್ಷರು ಆಗಿರುವ ಡಿಕೆಶಿ ಅವರು ತಮ್ಮ ಮೇಲಿಟ್ಟಿರುವ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ ಪಕ್ಷ ನಿಷ್ಠೆಯಿಂದ ಪಕ್ಷದ ಏಳಿಗೆಗಾಗಿ ಹಾಗೂ ಜನರ ಹಿತಕ್ಕಾಗಿ ಶಿಸ್ತು, ಸಂಯಮದ ಸಿಪಾಯಿಯಾಗಿ ಕೊಟ್ಟಂತಹ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತೇನೆ ಎಂದಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೆ ರಾಜಕೀಯವಾಗಿ ಸಕ್ರಿಯ

ಕರ್ನಾಟಕ ಕಾಂಗ್ರೆಸ್ ನ ಪ್ರಭಾವಿ ನಾಯಕಿಯರಲ್ಲಿ ಒಬ್ಬರಾದ ಲಕ್ಷ್ಮಿ ಹೆಬ್ಬಾಳ್ಕರ್ ಕರ್ನಾಟಕದ ಪ್ರಸ್ತುತ ಕಾಂಗ್ರೆಸ್ ವಕ್ತಾರರಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೃಷಿ ನೀತಿ, ಮಸೂದೆ ವಿರುದ್ಧ ದನಿಯೆತ್ತಬೇಕಾಗುತ್ತದೆ.

ಮೈಸೂರು ವಿವಿ ರಾಜ್ಯಶಾಸ್ತ್ರ, ಎಂಎ ಪದವೀಧರೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಸುಮಾರು 16 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿ ಕಾರ್ಯಕರ್ತೆಯಾಗಿ ದುಡಿದ ಬಳಿಕ ಕರ್ನಾಟಕ ಮಹಿಳಾ ಕಾಂಗ್ರಸ್ ನ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರು. ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ ನೀಡಿ ಸುದ್ದಿಯಾದವರು.

ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿರುವ ಅವರು 2013ರಲ್ಲಿ ವಿಧಾನಸಭೆಗೆ 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಚುನಾವಣೆ ವೇಳೆ ವೋಟಿಗಾಗಿ ನೋಟು, ಮರಾಠಿಗರ ಪರ ಜೈಕಾರ, ಜಾರಕಿಹೊಳಿ ಕುಟುಂಬದ ವಿರುದ್ಧದ ದ್ವೇಷದ ರಾಜಕರಣ ಮುಂತಾದವು ಲಕ್ಷ್ಮಿ ಅವರ ವೃತ್ತಿ ಬದುಕಿನ ಆರೋಪಗಳು, ಕಪ್ಪುಚುಕ್ಕೆಗಳು.

LEAVE A REPLY

Please enter your comment!
Please enter your name here